ಬದಿಯಡ್ಕ: ನಬಾರ್ಡ್‍ನ ಕೆ.ಡಬ್ಲ್ಯು.ಎಫ್ ಸೋಯಿಲ್ ಪ್ರೋಜೆಕ್ಟ್ ಕಾಸರಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ ಮುಗು ವಾಟರ್ ಶೆಡ್ ಹಾಗೂ ಸೆಂಟರ್ ಪಾರ್ ರಿಸರ್ಚ್ ಆಂಡ್ ಡೆವೆಲಪ್ಮೆಂಟ್ (ಸಿ.ಆರ್.ಡಿ.)ನೀಲೇಶ್ವರ ಜಂಟಿಯಾಗಿ ನಿರ್ಮಿಸಿರುವ ಸ್ವಯಂಚಾಲಿತ ಹವಾಮಾನ ಸಂವ್ರೇಕ್ಷಣಾ ಕೇಂದ್ರವನ್ನು ಬುಧವಾರ ಉದ್ಘಾಟಿಸಲಾಯಿತು. ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು-ಹೈಸ್ಕೂಲು ಆವರಣದಲ್ಲಿ ಈ ನೂತನ ಘಟಕ ನಿರ್ಮಿಸಲಾಗಿದೆ. ಘಟಕವನ್ನು ನಬಾರ್ಡ್ ಕೇರಳ ವಲಯ ಮಹಾ ಪ್ರಬಂಧಕ ಪಿ.ಬಾಲಚಂದ್ರನ್ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.
ಬಳಿಕ ಬೇಳ ಬಾರ್ತಲೋಮಿಯ ಹಿರಿಯ ಮಾಧ್ಯಮಿಕ ಶಾಲಾ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ವರ್ತಮಾನದ ಕಾಲಘಟ್ಟದಲ್ಲಿ ಬದಲಾದ ಹವಾಮಾನಕ್ಕೆ ಅನುಗುಣವಾಗಿ ಕೃಷಿ ಮುನ್ನಡೆಸಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಹೊಸ ತಲೆಮಾರಿನ ಯುವಜನರು ಪ್ರಸ್ತುತ ಕೃಷಿಯತ್ತ ಆಕರ್ಷಿತರಾಗುತ್ತಿದ್ದು, ಸಾಂಪ್ರದಾಯಿಕತೆಗೆ ತೊಡಕಾಗದಂತೆ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ತುರ್ತು ಅನಿವಾರ್ಯತೆಯೂ ಇದೆ. ಈ ನಿಟ್ಟಿನಲ್ಲಿ ಸ್ವಯಂಚಾಲಿತ ಹವಾಮಾನ ಸಂವ್ರೇಕ್ಷಣ ಕೇಂದ್ರ ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಿರುವುದು ಸ್ತುತ್ಯರ್ಹವಾದುದು ಎಂದರು.
ಜಿಲ್ಲಾ ನಬಾರ್ಡ್ ಪ್ರಬಂಧಕಿ ದಿವ್ಯಾ ಉಪಸ್ಥಿತರಿದ್ದು ಶುಭಹಾರೈಸಿದರು. ಚೇರಿಪ್ಪಾಡಿ, ಕುಂಜಾರು, ಮುಗು, ಬಾನಂತವಾಡಿ ವಾಟರ್ ಶೆಡ್ ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಿ.ಆರ್.ಡಿ ಯ ನಿರ್ದೇಶಕ ಢಾ.ಶಶಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪಿ.ಆರ್.ಒ. ಶಾಜಿ ನಿರೂಪಿಸಿ ವಂದಿಸಿದರು.