ಪೆರ್ಲ : ಬಲಿಪ ಗಾನಮಾರ್ಗದ ಸಮರ್ಥ ಉತ್ತರಾಧಿಕಾರಿ ಪ್ರಸಾದ ಬಲಿಪರ ಅಗಲಿಕೆಯಿಂದ ಉಂಟಾದ ಶೂನ್ಯತೆ ತೆಂಕಣ ಯಕ್ಷಗಾನದ ಗಾನಶೃಂಖಲೆಯನ್ನು ಗಂಭೀರವಾಗಿ ಕಾಡಲಿದೆ. ತೆಂಕಣದ ರಾಜರಸವೇ ವೀರರಸ. ಅದನ್ನು ಪ್ರಸಾದ ಬಲಿಪರಂತೆಯೇ ಹಾಡಿ, ರಂಗಕ್ಕೆ ರಸದ ಜೀವಕಳೆ ತುಂಬಲು ಮತ್ತೊಮ್ಮೆ ಪ್ರಸಾದರು ಬಲಿಪ ಮನೆತನದಲ್ಲಿ ಭಾಗವತರಾಗಿಯೇ ಜನಿಸಿ ಬರಲಿ ಎಂದು ಹಿರಿಯ ವಿದ್ವಾಂಸ ಕೋಟೆ ರಾಮ ಭಟ್ ನುಡಿದರು.
ಯಕ್ಷಾಂತರಂಗ ಪೆರ್ಲ ಮತ್ತು ದಿ. ಬಲಿಪ ನಾರಾಯಣ ಭಾಗವತ ಪ್ರತಿಷ್ಠಾನ (ರಿ) ಪೆರ್ಲ ಇದರ ಜಂಟಿ ನೇತೃತ್ವದಲ್ಲಿ ಪೆರ್ಲದ ಬಲಿಪ ಸ್ಮೃತಿ ಭವನದಲ್ಲಿ ನಡೆದ ಪ್ರಸಾದ ಬಲಿಪ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತಾಡಿದರು.
ಪ್ರಸಾದ ಬಲಿಪರ ಭಾವಚಿತ್ರ ಕ್ಕೆ ಸಾಮೂಹಿಕ ಪುಷ್ಪಾರ್ಚನೆ ನಡೆಸಿ ಶ್ರದ್ದಾಂಜಲಿ ಅರ್ಪಿಸಲಾಯಿತು.
ಕಣಿಪುರ ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ. ನಾ. ಚಂಬಲ್ತಿಮಾರ್ ಮಾತನಾಡಿ ಪ್ರಸಾದರಂತಹ ವ್ಯಕ್ತಿತ್ವ ಮತ್ತು ಗಾನನಿಷ್ಠೆ ಹೊಂದಿದ ಭಾಗವತರೇ ಅಪೂರ್ವ. ಅವರು ಬಲಿಪ ಪರಂಪರೆಯನ್ನೊಂದು ತಪಸ್ಸಿನಂತೆ ಆರಾಧಿಸಿದವರು. ಕೀರ್ತಿ, ಪ್ರಸಿದ್ದಿ,ಪ್ರಚಾರದ ಅಮಲು ತಲೆಗೇರಲು ಆಸ್ಪದ ನೀಡದೇ ಹಿರಿಯ ಬಲಿಪರ ಅದೇ ಗಾನಮಾರ್ಗದಲ್ಲಿ ತಪಸ್ವಿಯಂತೆ ನಡೆದವರು. ಅವರ ವಿಯೋಗ ನಿಜಾರ್ಥದಲ್ಲಿ ತೆಂಕಣ ಯಕ್ಷಗಾನದ ತುಂಬಲಾರದ ನಷ್ಟ ಎಂದರು.
ಪೆರ್ಲ ಗುರುಕುಲ ಮುದ್ರಣಾಲಯದ ರಾಜಾರಾಂ ಪೆರ್ಲ ಮಾತನಾಡಿ ಬಲಿಪರು ನಮ್ಮ ನೆಲದವರೆನ್ನುವುದೇ ನಮ್ಮ ಹೆಮ್ಮೆ. ಅವರ ಕುಟುಂಬಕ್ಕೆ ಈಗ ಸಾಂತ್ವನ, ಸಹಾಯ ಹಸ್ತ ಬೇಕಾಗಿದೆ ಎಂದರು. ಪತ್ರಕರ್ತ, ಕಲಾವಿದ ಶೇಣಿ ವೇಣುಗೋಪಾಲ ಭಟ್ ಕಾರ್ಯಕ್ರಮ ನಿರೂಪಿಸಿದರು. ಭಾಗವತ ಡಾ. ಸತೀಶ ಪುಣಿಂಚಿತ್ತಾಯ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.