ಬಂಡಾ: ಗಂಡು ಮಗುವಿಗೆ ಜನ್ಮ ನೀಡುವಂತೆ ಅತ್ತೆ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ನಡೆದ ಎರಡು ದಿನಗಳ ನಂತರ ಶುಕ್ರವಾರ ಆಕೆಯ ಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಮತೌಂಡ್ ಪ್ರದೇಶದಲ್ಲಿ ವಾಹನಗಳ ತಪಾಸಣೆ ವೇಳೆ ಆತ್ಮಹತ್ಯೆ ಮಾಡಿಕೊಂಡ ಜಿಲ್ಲಾ ಪಂಚಾಯತ್ ಸದಸ್ಯೆ ಶ್ವೇತಾ ಸಿಂಗ್ ಗೌರ್ ಅವರ ಪತಿ ದೀಪಕ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಬಂಡಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ನಿವಾಸ್ ಮಿಶ್ರಾ ಅವರು ಹೇಳಿದ್ದಾರೆ.
ಬಂಡಾದ ಇಂದಿರಾ ನಗರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಬುಧವಾರ ಗೌರ್ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿ ದೀಪಕ್ ಸಿಂಗ್, ಅವರ ತಾಯಿ, ತಂದೆ ಹಾಗೂ ಅವರ ಹಿರಿಯ ಸಹೋದರ ತಮ್ಮ ಸಹೋದರಿಯನ್ನು ಹತ್ಯೆ ಮಾಡಿದ್ದಾರೆ ಎಂದು ಶ್ವೇತಾ ಸಿಂಗ್ ಗೌರ್ ಅವರ ಸಹೋದರ ಆರೋಪಿಸಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ತನ್ನ ಸಹೋದರಿಗೆ ಗಂಡು ಮಗುವಿಗೆ ಜನ್ಮ ನೀಡುವಂತೆ ಅತ್ತೆ ನಿರಂತರವಾಗಿ ಪೀಡಿಸುತ್ತಿದ್ದರು ಮತ್ತು ಇದುವರೆಗೂ ಅವಳಿಗೆ ಗಂಡು ಮಗು ಜನಿಸದಿರುವ ಬಗ್ಗೆ ವ್ಯಂಗ್ಯವಾಡುತ್ತಿದ್ದರು ಎಂದು ಬಿಜೆಪಿ ನಾಯಕಿಯ ಸಹೋದರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.