ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾಜ್ ಷರೀಫ್, ಉಭಯ ರಾಷ್ಟ್ರಗಳ ನಡುವೆ ಅರ್ಥಪೂರ್ಣ ಮಾತುಕತೆ ಪರ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಪಾಕಿಸ್ತಾನದ 23ನೇ ಪ್ರಧಾನಿಯಾಗಿ ಆಯ್ಕೆಯಾದ ಷರೀಫ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿ ಕಳುಹಿಸಿದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಶೆಹಬಾಜ್ ಷರೀಫ್ ಪತ್ರ ಕಳುಸಿದ್ದಾರೆ. ಭಾರತವು ಪಾಕಿಸ್ತಾನದೊಂದಿಗೆ ರಚನಾತ್ಮಕ ಸಂಬಂಧವನ್ನು ಬಯಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಾಶ್ಮೀರ ವಿಚಾರ ಸೇರಿದಂತೆ ಉಭಯ ದೇಶಗಳ ಮಧ್ಯೆ ಪರಿಹರಿಸಿಕೊಳ್ಳಲು ಬಾಕಿಯಿರುವ ವಿಚಾರಗಳ ಬಗ್ಗೆ ನಿರ್ಣಯವಾಗಬೇಕಿದೆ. ಆದಾಗ್ಯೂ, ಭಾರತದ ಜೊತೆಗೆ ಪಾಕಿಸ್ತಾನ ಶಾಂತಿಯುತ ಮತ್ತು ಸಹಭಾಗಿತ್ವದ ಸಂಬಂಧ ಬಯಸುತ್ತದೆ ಎಂದು ಅವರು ಹೇಳಿದ್ದಾರೆ.
ಶೆಹಬಾಜ್ ಷರೀಫ್ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿದ ಅಭಿನಂದನಾ ಸಂದೇಶದಲ್ಲಿ, ಭಯೋತ್ಪಾದನೆ ಮುಕ್ತ ಪ್ರದೇಶದಲ್ಲಿ ಭಾರತವು ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ ಎಂದು ಹೇಳಿದ್ದರು.