ಕಡಪ: ಕೆಲಸ ಮಾಡುತ್ತಿದ್ದಾಗ ಲ್ಯಾಪ್‌ಟಾಪ್ ಸ್ಫೋಟಗೊಂಡು 23 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಬಿ ಕೋಡೂರು ಮಂಡಲದ ಮೇಕವಾರಿಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಬೆಂಗಳೂರು ಮೂಲದ ಮ್ಯಾಜಿಕ್ ಸಲ್ಯೂಷನ್ಸ್‌ನಲ್ಲಿ ಉದ್ಯೋಗಿಯಾಗಿರುವ ಸುಮಲತಾ ಅವರು ಶೇಕಡ 80ರಷ್ಟು ಸುಟ್ಟ ಗಾಯಗಳಾಗಿವೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಸುಮಲತಾ ಮನೆಯಿಂದಲೇ ಕೆಲಸ ಮಾಡುತ್ತಿದ್ದರು.
ತಮ್ಮ ಮಗಳು ತನ್ನ ಮಲಗುವ ಕೋಣೆಯಲ್ಲಿ ಎಂದಿನಂತೆ ಬೆಳಿಗ್ಗೆ 8 ಗಂಟೆಗೆ ತನ್ನ ಪಾಳಿಯನ್ನು ಪ್ರಾರಂಭಿಸಿದಳು ಎಂದು ಆಕೆಯ ಪೋಷಕರು ವೆಂಕಟ ಸುಬ್ಬಾ ರೆಡ್ಡಿ ಮತ್ತು ಲಕ್ಷ್ಮಿ ನರಸಮ್ಮ ಅವರು ಹೇಳಿದ್ದಾರೆ. ಅವಳು ತನ್ನ ತೊಡೆಯ ಮೇಲೆ ಇಟ್ಟಿದ್ದ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಅದು ಸ್ಫೋಟಗೊಂಡಿದೆ. ಆಕೆಯ ಕೊಠಡಿಯಿಂದ ಹೊಗೆ ಹೊರ ಬರುತ್ತಿತ್ತು. ಇದನ್ನು ನೋಡಿ ಒಳಗೆ ಹೋಗಿ ನೋಡಿದಾಗ ಮಗಳು ಹಾಸಿಗೆಯ ಮೇಲೆ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಆಕೆಯ ಪೋಷಕರು ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದಾಗ ಮಹಿಳೆಗೆ ಪ್ರಜ್ಞೆ ಬಂದಿದೆ.
ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಂದ ಕಡಪಾದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಂತರ ಆಕೆಯನ್ನು ತಿರುಪತಿಯ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸುಮಲತಾ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಬಿ ಕೋಡೂರು ಪೊಲೀಸ್ ಎಸ್‌ಐ ನಸ್ರಿನ್ ತಿಳಿಸಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸ್ಫೋಟಕ್ಕೆ ಕಾರಣ ಎಂದು ಕುಟುಂಬ ಸದಸ್ಯರು ಶಂಕಿಸಿದ್ದರೂ, ಗ್ಯಾಜೆಟ್‌ನ ಬ್ಯಾಟರಿಯು ಹೆಚ್ಚು ಬಿಸಿಯಾಗಿರುವುದು ಸ್ಫೋಟಕ್ಕೆ ಕಾರಣವಾಗಿರಬಹುದು.