ಶ್ರೀನಗರ: ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗಾಗಿ ಸ್ಯಾಟ್‌ಲೈಟ್ ಫೋನ್‌ಗಳು, ವೈ-ಫೈ ಸಂಪರ್ಕ ಸಾಧ್ಯವಿರುವ 'ಥರ್ಮಲ್ ಇಮೇಜರಿ' ಸಾಧನಗಳ ಬಳಕೆಗೆ ಉಗ್ರರು ಮುಂದಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ರಾತ್ರಿ ವೇಳೆ ಭದ್ರತಾ ಪಡೆಗಳ ಕಣ್ಣಿಗೆ ಬೀಳದೇ, ಪಾರಾಗಲು ಉಗ್ರರು ಈ ಸಾಧನಗಳ ಬಳಕೆಗೆ ಮುಂದಾಗಿದ್ದಾರೆ. ಉಗ್ರರ ಉಪಟಳ ಹೆಚ್ಚಾಗಿರುವ ಕಾಶ್ಮೀರದ ಕೆಲ ಪ್ರದೇಶಗಳಲ್ಲಿ ಇಂಥ ಸಾಧನಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇರಿಡಿಯಂ ಕಂಪನಿ ಉತ್ಪಾದಿತ 15 ಸ್ಯಾಟ್‌ಲೈಟ್ ಫೋನ್‌ಗಳು ಹಾಗೂ 'ಥರ್ಮಲ್ ಇಮೇಜರಿ' ಸಾಧನಗಳು ಪತ್ತೆಯಾಗಿವೆ. ಈ ಸಾಧನಗಳನ್ನು ಅಮೆರಿಕ ನೇತೃತ್ವದ ಮಿತ್ರಪಡೆಗಳು ಈ ಹಿಂದೆ ಅಫ್ಗಾನಿಸ್ತಾನದಲ್ಲಿ ಬಳಸುತ್ತಿದ್ದವು.
ಅಫ್ಗಾನಿಸ್ತಾನ ತೊರೆಯುವ ಸಂದರ್ಭದಲ್ಲಿ ಈ ಸಾಧನಗಳನ್ನು ಮಿತ್ರಪಡೆಗಳು ಅಲ್ಲಿಯೇ ಬಿಟ್ಟುಹೋಗಿರಬಹುದು ಇಲ್ಲವೇ ತಾಲಿಬಾನ್ ಪಡೆಗಳು ಅಥವಾ ಉಗ್ರರು ಅವುಗಳನ್ನು ದೋಚಿರಬಹುದು. ಅವುಗಳನ್ನು ಕಾಶ್ಮೀರದಲ್ಲಿನ ಉಗ್ರರಿಗೆ ಈಗ ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೂಮಿಯ ಯಾವುದೇ ಪ್ರದೇಶದಲ್ಲಿದ್ದರೂ, ಉಪಗ್ರಹ ಮೂಲಕ ವ್ಯಕ್ತಿಗಳ ನಡುವೆ ಸಂವಹನ 'ಸ್ಯಾಟಲೈಟ್ ಫೋನ್'ಗಳಿಂದ ಸಾಧ್ಯ.
ವ್ಯಕ್ತಿಯ ದೇಹ ಹೊರಸೂಸುವ ಉಷ್ಣತೆಯನ್ನು ಗ್ರಹಿಸುವ 'ಥರ್ಮಲ್ ಇಮೇಜರಿ' ಸಾಧನಗಳು, ಎಷ್ಟು ದೂರದಲ್ಲಿ ವ್ಯಕ್ತಿ ಇದ್ದಾನೆ ಎಂಬುದನ್ನು ತಿಳಿಯಲು ನೆರವಾಗುತ್ತವೆ.
ಉಗ್ರ ನಿಗ್ರಹ ಕಾರ್ಯಾಚರಣೆ ನಡೆಯುವಾಗ, ಯೋಧರ ಚಲನವಲನವನ್ನು ಈ 'ಥರ್ಮಲ್ ಇಮೇಜರಿ' ಸಾಧನದಿಂದ ಉಗ್ರರು ತಿಳಿದುಕೊಳ್ಳುತ್ತಾರೆ. ಇವು ಭದ್ರತಾಪಡೆಗಳ ಕಣ್ತಪ್ಪಿಸಿ ಕ್ಷಿಪ್ರವಾಗಿ ಪರಾರಿಯಾಗಲು ಉಗ್ರರಿಗೆ ನೆರವಾಗುತ್ತವೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.
ಉಗ್ರರು ಇಂಥ ಸಾಧನಗಳನ್ನು ಬಳಕೆ ಮಾಡುವ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ. ಇವುಗಳ ಬಳಕೆ ಮೇಲೆ ನಿಗಾ ಇಡಲಾಗಿದೆ. ಈ ಸಾಧನಗಳನ್ನು ಬಳಕೆ ಮಾಡುವವರನ್ನು ಶೀಘ್ರವೇ ಬಂಧಿಸಲಾಗುವುದು ಇಲ್ಲವೇ ಅವರನ್ನು ತಟಸ್ಥಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.