ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್‌ನ ಹಿರಿಯ ನಾಗರಿಕರಾದ ಪುಷ್ಪಾ ಮುಂಜಿಯಲ್ ಅವರು ಚಿನ್ನಾಭರಣ ಸೇರಿದಂತೆ ತಮ್ಮ ಸಂಪೂರ್ಣ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ದೇಣಿಗೆ ನೀಡಿದ್ದಾರೆ. ತಮ್ಮ ಎಲ್ಲಾ ಆಸ್ತಿಯನ್ನು ರಾಹುಲ್ ಗಾಂಧಿಗೆ ವರ್ಗಾಯಿಸುವ ಸಲುವಾಗಿ ಸೋಮವಾರ ಜಿಲ್ಲಾ ನ್ಯಾಯಾಲಯದಲ್ಲಿ ವಿಲ್ ಪತ್ರವನ್ನು ಸಲ್ಲಿಸಿದ್ದಾರೆ.
ತಮ್ಮ ಆಸ್ತಿಯ ಪ್ರಮಾಣಪತ್ರವನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಮುಂಜಿಯಾಲ್ ಅವರು ರಾಹುಲ್ ಗಾಂಧಿಯವರ ವಿಚಾರಗಳಿಂದ ತಾನು ಪ್ರಭಾವಿತಳಾಗಿದ್ದೇನೆ ಎಂದು ಹೇಳಿದರು ಎನ್ನುವುದಾಗಿ ಕಾಂಗ್ರೆಸ್‌ನ ಮೆಟ್ರೋಪಾಲಿಟನ್ ಅಧ್ಯಕ್ಷ ಲಾಲ್‌ಚಂದ್ ಶರ್ಮಾ ಹೇಳಿದ್ದಾರೆ.
'ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ಈ ದೇಶದ ಏಕತೆ ಹಾಗೂ ಸಮಗ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು (ಪುಷ್ಪಾ) ಮುಂಜಿಯಾಲ್ ಅವರು ತನ್ನಲ್ಲಿ ಹೇಳಿದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ರಾಷ್ಟ್ರದ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಪುಷ್ಪಾ ಅವರು ಇದರಿಂದ ತುಂಬಾ ಪ್ರಭಾವಿತರಾಗಿದ್ದಾರೆ" ಎಂದು ಶರ್ಮಾ ಹೇಳಿದರು.
10 ತೊಲ ಬಂಗಾರ(ಸುಮಾರು 5.5 ಲಕ್ಷ ರೂ.)ಸೇರಿದಂತೆ 50 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ 78ರ ವಯಸ್ಸಿನ ಪುಷ್ಪಾ ವರ್ಗಾಯಿಸಿದ್ದಾರೆ. ತನ್ನ ಆಸ್ತಿ ಎಲ್ಲವೂ ಮರಣ ನಂತರ ರಾಹುಲ್ ಗಾಂಧಿಗೆ ಸೇರಬೇಕು ಎಂದು ಕೋರ್ಟ್ ಗೆ ವಿಲ್ ಪತ್ರವನ್ನು(ಉಯಿಲು)ಪುಷ್ಪಾ ಬರೆದುಕೊಟ್ಟಿದ್ದಾರೆ ಎಂದು ಶರ್ಮಾ ಮಾಹಿತಿ ನೀಡಿದರು.