ಮಾಸ್ಕೋ: ಮಾಸ್ಕೋ-ಸಮಾರ ರೈಲಿನಲ್ಲಿ ಗುರುವಾರ ಪ್ರಯಾಣಿಸುತ್ತಿರುವ ವೇಲೆ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರತೋವ್ ಅವರ ಮೇಲೆ ವ್ಯಕ್ತಿಯೊಬ್ಬ ಪೈಂಟ್ ಎರಚಿ ದಾಳಿ ನಡೆಸಿದ್ದಾನೆ. "ಮುರತೋವ್, ಇದು ನಮ್ಮ ಹುಡುಗರಿಗಾಗಿ" ಎಂದು ಬೊಬ್ಬೆ ಹೊಡೆಯುತ್ತಾ ಆ ವ್ಯಕ್ತಿ ಅವರ ಮೇಲೆ ಹಾಗೂ ಅವರ ಬಳಿಯಿರುವ ವಸ್ತುಗಳ ಮೇಲೆ ಪೈಂಟ್ ಎರಚಿದ್ದಾನೆ.
ಅಸೆಟೋನ್ ಇದ್ದ ಪೈಂಟ್ ಎರಚಿದ್ದರು, ಕಣ್ಣುಗಳು ಬಹಳಷ್ಟು ಉರಿಯುತ್ತಿದೆ ಎಂದು ಮುರತೋವ್ ಹೇಳಿದ್ದಾರೆ.
ಮುರತೋವ್ ಅವರು ನಡೆಸುವ ಪತ್ರಿಕೆ ʼನೊವೊಯಾ ಗಝೆಟಾʼ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಕಟುವಾಗಿ ಟೀಕಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು. ರಷ್ಯಾದ ಸಂವಹನ ಪ್ರಾಧಿಕಾರ ರೊಸ್ಕೊಮ್ನಾಡ್ಝೊರ್ ಎಚ್ಚರಿಕೆ ನೀಡಿದ ನಂತರ ಮಾರ್ಚ್ 28ರಂದು ಈ ಪತ್ರಿಕೆ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಗಿ ಬಂದಿತ್ತು.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಆರಂಭಗೊಂಡಂದಿನಿಂದ ರಷ್ಯಾದ ಮಾಧ್ಯಮದ ಮೇಲೆ ಹದ್ದಿನ ಕಣ್ಣು ಇಡಲಾಗುತ್ತಿದ್ದು ಈ ಆಕ್ರಮಣವನ್ನು ವಿಶೇಷ ಮಿಲಿಟರಿ ಕಾರ್ಯಾಚರಣೆ ಎಂದೇ ಬಣ್ಣಿಸುವಂತೆ ಹಾಗೂ ʼಯುದ್ಧ,ʼ ʼಆಕ್ರಮಣʼ ಮುಂತಾದ ಪದಗಳನ್ನು ಬಳಸದಂತೆ ಸೂಚಿಸಲಾಗಿದೆ. ಕಾರ್ಯಾಚರಣೆ ಕುರಿತಂತೆ ʼಸುಳ್ಳು ಸುದ್ದಿʼ ಹರಡುವವರಿಗೆ 15 ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸಲಾಗುವುದೆಂದೂ ಎಚ್ಚರಿಸಲಾಗಿದೆ.