ಕುಂಬಳೆ: ಯಕ್ಷಗಾನ ಸಹಿತ ಕನ್ನಡ ನಾಡಿನ ಪಾರಂಪರಿಕ ಕಲೆಗಳು ಕೇವಲ ಪ್ರದರ್ಶನಗಳಿಗಷ್ಟೇ ಸೀಮಿತಗೊಳ್ಳಬಾರದು. ಅದು ಸಮಗ್ರ ಸಾಮಾಜಿಕ ವಿಕಾಸಕ್ಕೆ ಪ್ರೇರಣೆಯಾಗುವುದರ ಜೊತೆಗೆ ಸಾಮುದಾಯಿಕವಾದ ಸಮಷ್ಠಿಯ ಸಹಬಾಳ್ವೆ, ವ್ಯಕ್ತಿ ಶಕ್ತಿಯಾಗಿ ಬೆಳೆಯುವಲ್ಲಿ ಬೆಂಬಲ ನೀಡುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಕುಮುಟಾ ಅಭಿಪ್ರಾಯ ವ್ಯಕ್ತಪಡಿಸಿದರು.
ಅನಂತಪುರ ಅನಂತಶ್ರೀ ಸಭಾ ಭವನದಲ್ಲಿ ಭಾನುವಾರ ಅಪರಾಹ್ನ ನಡೆದ ಸಂಗೀತೋಪಕರಣ ವಾದಕನಾಗಿ ಬಹುಮುಖೀ ಆಸಕ್ತಿಗಳಿಂದ ಸ್ನೇಹಜೀವಿಯಾಗಿ ಬದುಕಿದ ಕಲಾವಿದ ದಿ. ಸದಾಶಿವ ಅನಂತಪುರ ಅವರ ಪ್ರಥಮ ಸಂಸ್ಮರಣೆಯೊಂದಿಗೆ ಸಂಸ್ಮರಣಾ ವೇದಿಕೆಯ ಉದ್ಘಾಟನೆ ಮತ್ತು ಸನ್ಮಾನ, ತಾಳಮದ್ದಳೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಯಕ್ಷಗಾನ ಕಲೆ ಸಹೃದಯ ಜನರಿಂದ ಉಳಿದು ಬೆಳೆದಿದೆ. ಸಮಗ್ರ ಕರ್ನಾಟಕದ ಕಲೆಯಾದರೂ ಸಾಕಷ್ಟು ವಿಸ್ತಾರಗೊಂಡಿಲ್ಲ. ಈ ನಿಟ್ಟಿನಲ್ಲಿ ಪೂರಕ ಚಟುವಟಿಕೆಗಳು ಆಗಬೇಕು ಎಂದ ಅವರು, ಸರ್ಕಾರದ ಆರ್ಥಿಕ ಬೆಂಬಲ ಸಾಕಾಗುತ್ತಿಲ್ಲ ಎಂದರು. ಯಕ್ಷಗಾನ ಕಲಾಕ್ಷೇತ್ರಕ್ಕೆ ಜಾಗತಿಕ ಮಟ್ಟದ ಮಾರುಕಟ್ಟೆ ಮೌಲ್ಯ ಲಭ್ಯವಾದಲ್ಲಿ ಸಾಮರಸ್ಯದ ಕೊಂಡಿಯಾದ ಈ ಅಪೂರ್ವ ಕಲೆ ಎಲ್ಲರನ್ನೂ ಹೊಕ್ಕು ಹೃದಯ ಶ್ರೀಮಂತಿಕೆಗೆ ಕಾರಣವಾಗುವುದು ಎಂದರು.
ಮಂಗಳೂರಿನ ಖ್ಯಾತ ವೈದ್ಯ, ಕಲಾವಿದ ಡಾ. ಜೆ.ಎನ್ .ಭಟ್ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಹಿರಿಯ ತಲೆಮಾರಿನ ಸಾಧಕ ಶ್ರೇಷ್ಠ ಕಲಾವಿದರ ನೆನಪಿಸುವಿಕೆ ವರ್ತಮಾನದ ಬದುಕಿಗೆ ಬೆಳಕಾಗಿ ದಾರಿ ತೋರಿಸುತ್ತದೆ. ಕಲಾವಿದರಾಗಿ ಸರಳ ಸಜ್ಜನಿಕೆಯ ವೈಕ್ತಿತ್ವದವರಾಗಿದ್ದ ದಿ. ಸದಾಶಿವ ಅನಂತಪುರ ಅವರ ಕಲಾ ಬದುಕಿನ ಪುನರವಲೋಕನದಿಂದ ಇಂದಿನ ಜಟಿಲತೆಯ ಬದುಕಿಗೆ ಏನನ್ನಾದರೂ ಪರಿಹಾರ ಕಾಣಲು ಸಾಧ್ಯವಿದೆ ಎಂದರು.
ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಸಂಸ್ಮರಣಾ ಭಾಷಣ ಮಾಡಿ, ದಿ.ಸದಾಶಿವ ಅನಂತಪುರ ಅವರೊಂದಿಗೆ ನಿಕಟ ಒಡನಾಟದ ಮೆನಪುಗಳನ್ನು ಮೆಲುಕುಹಾಕಿದರು. ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ನಿವೃತ್ತ ಪ್ರಾಧ್ಯಾಪಕ, ನಿಟ್ಟೆ ಯೂನಿವರ್ಸಿಟಿ ಪರೀಕ್ಷಾಂಗದ ನಿವೃತ್ತ ಕುಲಸಚಿವ ಡಾ. ಎ.ಪಿ.ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡಿನ ಹಿರಿಯ ಸಂಗೀತಜ್ಞೆ, ಪ್ರಸಿದ್ಧ ಆಲಂಪಾಡಿ ಮನೆತನದ ರಾಧಾಮುರಳೀಧರ್ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಪತ್ರಕರ್ತ, 'ಕಣಿಪುರ' ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಪ್ರಸ್ತಾವಿಕವಾಗಿ ಮಾತನಾಡಿ ಅಭಿನಂದನಾ ಭಾಷಣ ಮಾಡಿದರು. ನಿವೃತ್ತ ಪೋಲಿಸ್ ಅಧಿಕಾರಿ ಸುಕುಮಾರ ಅನಂತಪುರ, ಅನಂತಪುರ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಉದಯ ಕುಮಾರ್ ಗಟ್ಟಿ, ಪುತ್ತಿಗೆ ಗ್ರಾ. ಪಂ ಸದಸ್ಯ ಜನಾರ್ಧನ ಪೂಜಾರಿ ಕಣ್ಣೂರು ಉಪಸ್ಥಿತರಿದ್ದರು. ಸತ್ಯಶಂಕರ ಅನಂತಪುರ ಸ್ವಾಗತಿಸಿ, ಚೈತ್ರ ಅನಂತಪುರ ವಂದಿಸಿದರು. ಪತ್ರಕರ್ತ, ಅರ್ಥಧಾರಿ ಶೇಣಿ ವೇಣುಗೋಪಾಲ ಭಟ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ 'ಪಾರ್ಥ ಸಾರಥ್ಯ' ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಡಾ. ಸತೀಶ ಪುಣಿಂಚಿತ್ತಾಯ ಪೆರ್ಲ, ಶ್ರೀನಾರಾಯಣ ಕೋಳಾರಿ, ಸಮೃದ್ದ ಪುಣಿಚಿತ್ತಾಯ ಪೆರ್ಲ, ಅರ್ಥದಾರಿಗಳಾಗಿ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ಕುಂಬ್ಳೆ ಶ್ರೀಧರ ರಾವ್, ಡಾ.ಜಿ.ಎಲ್ ಹೆಗ್ಡೆ, ಶೇಣಿ ವೇಣುಗೋಪಾಲ ಭಟ್, ಕೆಕ್ಕಾರು ಆನಂದ ಭಟ್ ಪಾಲ್ಗೊಂಡರು.