ನವದೆಹಲಿ: ಉಕ್ರೇನ್ ವಿರುದ್ಧದ ಯುದ್ಧಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿರುವುದರಿಂದ ರಷ್ಯಾ ಮತ್ತು ಉಕ್ರೇನ್ ನಡುವಣ ಶಾಂತಿ ಮಾತುಕತೆಗಾಗಿ ಭಾರತ ಮಧ್ಯಸ್ಥಿಕೆ ವಹಿಸಬಹುದು ಎಂದು ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾವ್ರೊವ್ ಶುಕ್ರವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಜೊತೆಗಿನ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಾವ್ರೋವ್, ಭಾರತ ಪ್ರಮುಖವಾದ ರಾಷ್ಟ್ರವಾಗಿದೆ. ಸಮಸ್ಯೆಗೆ ಪರಿಹಾರ ನೀಡುವ ಪಾತ್ರ ನಿರ್ವಹಿಸಲು ಭಾರತ ಎದುರು ನೋಡುತ್ತಿದ್ದರೆ. ಭಾರತ ಅಂತರರಾಷ್ಟ್ರೀಯ ಸಮಸ್ಯೆಗಳಿಗೆ ನ್ಯಾಯಯುತ ಮತ್ತು ತರ್ಕಬದ್ಧ ವಿಧಾನದ ನಿಲುವನ್ನು ಹೊಂದಿದ್ದರೆ, ಅಂತಹ ಪ್ರಕ್ರಿಯೆಗೆ ಬೆಂಬಲವಿದೆ ಎಂದರು.
ಲಾವ್ರೋವ್ ಭಾರತಕ್ಕೆ ಎರಡು ದಿನಗಳ ಅಧಿಕೃತ ಭೇಟಿ ಕೈಗೊಂಡಿದ್ದು, ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದಾರೆ. ಭಾರತದ ಮೇಲೆ ಅಮೆರಿಕದ ಒತ್ತಡ, ಇಂಧನ ಬೆಲೆ ಹೆಚ್ಚಳ, ರಷ್ಯಾ ಮೇಲಿನ ನಿರ್ಬಂಧ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಚರ್ಚಿಸಿದ್ದಾರೆ.