ಮಧೂರು : ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕಳೆದ 48 ದಿನಗಳಿಂದ ನಡೆದುಬರುತ್ತಿರುವ ಮಂಡಲ ಭಜನಾ ಸಂಕೀರ್ತನೋತ್ಸವದ ಮಂಗಲ ಮುಹೂರ್ತದಲ್ಲಿ ಧಾರಾಕಾರ ವರ್ಷಧಾರೆ ಸುರಿದು ಭಕ್ತಾದಿಗಳಲ್ಲಿ ರೋಮಾಂಚನವನ್ನು ಸೃಷ್ಟಿಸಿತು. ಇತಿಹಾಸ ಪ್ರಸಿದ್ಧ ಕ್ಷೇತ್ರದ ಜೀರ್ಣೋದ್ಧಾರ ಕೆಲಸ ಕಾರ್ಯಗಳನ್ನು ತ್ವರಿತಗೊಳಿಸಲು ಹಾಗೂ ದೇವತಾನುಗ್ರಹ ಪ್ರಾಪ್ತಿಗಾಗಿ ಮಾರ್ಚ್ 6ರಂದು 48 ದಿನಗಳ ನಿತ್ಯ ಭಜನೆ, ಮಂಡಲ ಸಂಕೀರ್ತನೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ಸಂಜೆ ವಿವಿಧ ಭಜನಾ ತಂಡಗಳು ಭಜನೆಯೊಂದಿಗೆ ಪ್ರದಕ್ಷಿಣೆಯನ್ನು ಬಂದು ಶ್ರೀ ಸನ್ನಿಯಲ್ಲಿ ಮಂಗಲವನ್ನು ಹಾಡಲಾಯಿತು.
ಈ ಸಂದರ್ಭದಲ್ಲಿ ಭಜನಾ ತಂಡದ ಮುಂಭಾಗದಲ್ಲಿ ಭರತನಾಟ್ಯ ಸೇವೆಯೊಂದಿಗೆ ಕು. ಶಮಾ ವಳಕ್ಕುಂಜ ಮಾತೆಯರ ಭಜನಾ ರಾಗಕ್ಕೆ ಹೆಜ್ಜೆ ಹಾಕಿ ಗಮನಸೆಳೆದರು. ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಅವರು ಪ್ರಾರ್ಥನೆಯನ್ನು ನಡೆಸುವ ವೇಳೆ ಧಾರಾಕಾರ ಮಳೆ ಸುರಿಯಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹಾಗೂ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನವಾಯಿತು.