ನವದೆಹಲಿ: ಭಾರತದಲ್ಲಿ ಕಲ್ಲಿದ್ದಲು ದಾಸ್ತಾನು ಕಡಿಮೆಯಾಗುತ್ತಿದ್ದು ಹಿಂದೆಂದೂ ಉಂಟಾಗದ ವಿದ್ಯುತ್ ಕೊರತೆ ಉಂಟಾಗುವ ಸಾಧ್ಯತೆ ಇದೆ.
ದೇಶಾದ್ಯಂತ ಇರುವ ಥರ್ಮಲ್ ವಿದ್ಯುತ್ ಘಟಕಗಳಲ್ಲಿ ಕಲ್ಲಿದ್ದಲು ದಾಸ್ತಾನು ಕಡಿಮೆಯಾಗುತ್ತಿದೆ. ಭಾರತದ ಕೇಂದ್ರ ವಿದ್ಯುತ್ ಪ್ರಾಧಿಕಾರದ ಇತ್ತೀಚಿನ ದೈನಂದಿನ ಕಲ್ಲಿದ್ದಲು ವರದಿಯ ಪ್ರಕಾರ, ದೇಶೀಯ ಕಲ್ಲಿದ್ದಲನ್ನು ಬಳಕೆ ಮಾಡುವ 150 ಥರ್ಮಲ್ ಘಟಕಗಳ ಪೈಕಿ 81 ರಲ್ಲಿ ದಾಸ್ತಾನು ಕಡಿಮೆ ಇದೆ. ಇನ್ನು ಖಾಸಗಿ ಥರ್ಮಲ್ ಘಟಕಗಳಲ್ಲಿಯೂ ಕಲ್ಲಿದ್ದಲು ದಾಸ್ತಾನು ಪರಿಸ್ಥಿತಿ ಉತ್ತಮವಾಗೇನು ಇಲ್ಲ.
54 ಘಟಕಗಳ ಪೈಕಿ 28 ಘಟಕಗಳಲ್ಲಿ ಕಲ್ಲಿದ್ದಲು ದಾಸ್ತನು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ.
ವಿದ್ಯುತ್ ಘಟಕಗಳಲ್ಲಿನ ಕಲ್ಲಿದ್ದಲು ಇನ್ವೆಂಟ್ರಿಗಳಲ್ಲಿ 9 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ಮಾತ್ರ ಲಭ್ಯವಿದ್ದು, ಏಪ್ರಿಲ್ ನ ಅಂತ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗುವ ಸಾಧ್ಯತೆ ಇದೆ, ಕಲ್ಲಿದ್ದಲು ಪೂರೈಕೆ ಸುಧಾರಣೆಯಾಗದೇ ಇದ್ದಲ್ಲಿ ಸಮಸ್ಯೆ ಎದುರಾಗಲಿದೆ ಎಂದು ಅಖಿಲ ಭಾರತ ವಿದ್ಯುತ್ ಅಭಿಯಂತರರ ಫೆಡರೇಷನ್ ನ ಅಧ್ಯಕ್ಷ ಶೈಲೇಂದ್ರ ದುಬೆ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ 7ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ಮಾತ್ರ ಲಭ್ಯವಿದೆ. ಹರ್ಯಾಣದಲ್ಲಿ 8 ದಿನಗಳಿಗೆ ಬಳಕೆ ಮಾಡುವಷ್ಟು ಕಲ್ಲಿದ್ದಲು ಇದ್ದರೆ, ರಾಜಸ್ಥಾನದಲ್ಲಿ 17 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ. ಆದರೆ ಸಾಮಾನ್ಯವಾಗಿ ಕನಿಷ್ಠ 26 ದಿನಗಳಿಗೆ ಆಗುವಷ್ಟು ಕಲ್ಲಿದ್ದಲನ್ನು ಹೊಂದಿರಬೇಕು. ಆಂಧ್ರ, ತಮಿಳುನಾಡು, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಜಾರ್ಖಂಡ್, ಚತ್ತೀಸ್ ಗಢ ಗಳಲ್ಲಿಯೂ ಕಲ್ಲಿದ್ದಲು ಪರಿಸ್ಥಿತಿ ಉತ್ತಮವಾಗಿಲ್ಲ
ಏ.19,2022 ರ ವರೆಗೂ ಗರಿಷ್ಠ ವಿದ್ಯುತ್ ಬೇಡಿಕೆ 1,88,014 ಮೆಗಾ ವ್ಯಾಟ್ ನಷ್ಟಿತ್ತು. ಆದರೆ 4,469 ಮೆಗಾ ವ್ಯಾಟ್ ನಷ್ಟು ಕೊರತೆ ಇದೆ.