ನವದೆಹಲಿ: ನ್ಯಾಯಮೂರ್ತಿಗಳನ್ನು ದೂಷಿಸುವ ಸರ್ಕಾರದ ಹೊಸ ಪ್ರವೃತ್ತಿ ಆರಂಭವಾಗುತ್ತಿರುವುದು ದುರದೃಷ್ಟಕರವಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಶುಕ್ರವಾರ ಹೇಳಿದ್ದಾರೆ.
ಛತ್ತೀಸ್ ಗಢದ ಮಾಜಿ ಪ್ರಧಾನ ಕಾರ್ಯದರ್ಶಿ ವಿರುದ್ಧದ ಎಫ್ ಐಆರ್ ರದ್ದತಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ, ಹೈಕೋರ್ಟ್ ಆದೇಶವನ್ನು ವಕೀಲರೊಬ್ಬರು ಪ್ರಶ್ನಿಸಿದ ನಂತರ ಎನ್ ವಿ ರಮಣ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಛತ್ತೀಸ್ ಗಢ ಸರ್ಕಾರ ಹಾಗೂ ಹೋರಾಟಗಾರ ಉಚಿತ್ ಶರ್ಮಾ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆರೋಪಗಳು ಮೇಲ್ನೋಟಕ್ಕೆ ಸಂಭಾವ್ಯದ ಆಧಾರದ ಮೇಲಿರುವುದಾಗಿ ಹೇಳಿ, ಅಮನ್ ಕುಮಾರ್ ಸಿಂಗ್ ವಿರುದ್ದದ ಎಫ್ ಐಆರ್ ನ್ನು ಹೈಕೋರ್ಟ್ ರದ್ದುಪಡಿಸಿತ್ತು. ಅರ್ಜಿದಾರರ ಪರ ಹಿರಿಯ ವಕೀಲ ಸಿದ್ದಾರ್ಥ್ ದಾವೆ, ಎಫ್ ಐಆರ್ ರದ್ದತಿಗೆ ಕಾರಣಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎನ್. ವಿ. ರಮಣ, ನ್ಯಾಯಾಲಯಗಳ ದೂಷಿಸಲು ಪ್ರಯತ್ನಿಸಬೇಡಿ, ನ್ಯಾಯಮೂರ್ತಿಗಳನ್ನು ದೂಷಿಸುವ ಸರ್ಕಾರದ ಹೊಸ ಪ್ರವೃತ್ತಿ ದುರದೃಷ್ಟಕವಾಗಿದೆ ಎಂದರು.