ಕಾಸರಗೋಡು: ಗಣನೀಯವಾಗಿ ಏರಿಕೆಯಾಗುತ್ತಿರುವ ಇಂಧನ ಬೆಲೆ ತಡೆಗೆ ಸರ್ಕಾರ ರಷ್ಯಾದ ತೈಲ ಖರೀದಿಸುವಂತಹ ಇತರ ಆಯ್ಕೆಗಳೊಂದಿಗೆ ಮುಂದೆ ಬರಬೇಕು ಎಂದು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಇಂಧನ ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಇದರೊಂದಿಗೆ ನೋವು ನಿವಾರಕ ಔಷಧ, ಆ್ಯಂಟಿಬಯೋಟಿಕ್‍ಗಳು ಮತ್ತು ಸೋಂಕು ನಿವಾರಕಗಳು ಸೇರಿದಂತೆ ಅಗತ್ಯ ಔಷಧಿಗಳ ಬೆಲೆಯಲ್ಲಿ ಏರಿಕೆಯಾಗಿರುವುದು ಜನಸಾಮಾನ್ಯರ ಪಾಲಿಗೆ ಅತಿ ದೊಡ್ಡ ಹೊಡೆತ ತಂದೊಡ್ಡಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಔಷಧ ಬೆಲೆ ಪ್ರಾಧಿಕಾರ ಇದಕ್ಕೆ ಅವಕಾಶ ನೀಡಿರುವುದು ಅತ್ಯಂತ ದುರದೃಷ್ಟಕರ. ಇದು ನ್ಯಾಯಸಮ್ಮತವಲ್ಲದ ಗರಿಷ್ಠ ಬೆಲೆ ಏರಿಕೆಯಾಗಿದೆ. ರಾಷ್ಟ್ರೀಯ ಅಗತ್ಯಗಳಲ್ಲಿ ಒಂದಾದ ಔಷಧದ ಬೆಲೆಯನ್ನು ಹೆಚ್ಚಿಸಿರುವುದು ಸ್ವೀಕಾರಾರ್ಹವಲ್ಲ. ಹಣದುಬ್ಬರದಿಂದಾಗಿ ಭಾರತದಲ್ಲಿ ಕೋಟ್ಯಂತರ ಜನರ ದೈನಂದಿನ ಜೀವನವು ಶೋಚನೀಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಬೆಲೆ ಹೆಚ್ಚಳವನ್ನು ಮರುಪರಿಶೀಲಿಸಬೇಕೆಂದು ಸಂಸದ ರಾಜಮೋಹನ್ ಮೋಹನ್ ಉಣ್ಣಿತ್ತಾನ್ ಒತ್ತಾಯಿಸಿದ್ದಾರೆ.