ನವದೆಹಲಿ: ಭಾರತವು ಯಾವುದೇ ದೇಶ ಅಥವಾ ಸಮಾಜಕ್ಕೆ ಎಂದಿಗೂ ಬೆದರಿಕೆಯೊಡ್ಡಿಲ್ಲ ಮತ್ತು ಜಾಗತಿಕ ಸಂಘರ್ಷಗಳ ನಡುವೆಯೂ ಅದು ಇಡೀ ಪ್ರಪಂಚದ ಕಲ್ಯಾಣಕ್ಕಾಗಿ ಯೋಚಿಸುತ್ತಿದೆ ಎಂದು ಗುರುವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ, ದೇಶವು ಸಿಖ್ ಗುರುಗಳ ಆದರ್ಶಗಳನ್ನು ಅನುಸರಿಸುತ್ತಿದೆ ಎಂದು ಪ್ರತಿಪಾದಿಸಿದರು.
ಸಿಖ್ ಗುರು ತೇಜ್ ಬಹದ್ದೂರ್ ಅವರ 400 ನೇ ಜನ್ಮದಿನ ಅಂಗವಾಗಿ ಕೆಂಪು ಕೋಟೆಯಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೋದಿ, ಕೆಂಪು ಕೋಟೆಯ ಸಮೀಪವಿರುವ ಗುರುದ್ವಾರ ಸಿಸ್ ಗಂಜ್ ಸಾಹಿಬ್ ಗುರು ತೇಜ್ ಬಹದ್ದೂರ್ ಅವರ ಅಮರ ತ್ಯಾಗದ ಸಂಕೇತವಾಗಿದೆ ಎಂದರು.
ಈ ಪವಿತ್ರ ಗುರುದ್ವಾರವು ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ರಕ್ಷಿಸಲು ಗುರು ತೇಜ್ ಬಹದ್ದೂರ್ ಜಿ ಅವರ ತ್ಯಾಗ ಎಷ್ಟು ದೊಡ್ಡದಾಗಿದೆ ಎಂಬುದನ್ನು ನೆನಪಿಸುತ್ತದೆ. ಆ ಸಮಯದಲ್ಲಿ ದೇಶದಲ್ಲಿ ಧರ್ಮಾಂಧತೆಯ ಬಿರುಗಾಳಿ ಎದ್ದಿತ್ತು. ಧರ್ಮವನ್ನು ತತ್ವಶಾಸ್ತ್ರ, ವಿಜ್ಞಾನ ಮತ್ತು ಆತ್ಮಾವಲೋಕನದ ವಿಷಯವಾಗಿ ಪರಿಗಣಿಸಿದ ಭಾರತದಲ್ಲಿ ಧರ್ಮದ ಹೆಸರಿನಲ್ಲಿ ಜನರು ಹಿಂಸೆ ಮತ್ತು ದೌರ್ಜನ್ಯ ಎದುರಿಸುತ್ತಿದ್ದರು ಎಂದು ಹೇಳಿದರು.
ಆ ಸಮಯದಲ್ಲಿ, ಗುರು ತೇಜ್ ಬಹದ್ದೂರ್ ರೂಪದಲ್ಲಿ ತನ್ನ ಗುರುತನ್ನು ಉಳಿಸಿಕೊಳ್ಳಲು ಭಾರತಕ್ಕೆ ದೊಡ್ಡ ಭರವಸೆ ಇತ್ತು ಎಂದು ರಂಗಜೇಬನ ದಬ್ಬಾಳಿಕೆಯ ಚಿಂತನೆಯ ಮುಂದೆ ಗುರು ತೇಜ್ ಬಹದ್ದೂರ್ ಜೀ ‘ಹಿಂದ್ ಚಾದರ್’ ಆಗಿ ಬಂಡೆಯಂತೆ ನಿಂತರು’ ಎಂದು ಮೋದಿ ತಿಳಿಸಿದರು.
ಭಾರತವು ಯಾವುದೇ ದೇಶ ಅಥವಾ ಸಮಾಜಕ್ಕೆ ಎಂದಿಗೂ ಅಪಾಯವನ್ನು ತಂದಿಲ್ಲ. ಇಂದಿಗೂ ನಾವು ಇಡೀ ಪ್ರಪಂಚದ ಕಲ್ಯಾಣಕ್ಕಾಗಿ ಯೋಚಿಸುತ್ತೇವೆ. ನಾವು ಸ್ವಾವಲಂಬಿ ಭಾರತದ ಬಗ್ಗೆ ಮಾತನಾಡುವಾಗ, ನಾವು ಇಡೀ ಪ್ರಪಂಚದ ಪ್ರಗತಿಯನ್ನು ಆ ಗುರಿಯ ಮುಂದೆ ಇಡುತ್ತೇವೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ತೇಜ್ ಬಹದ್ದೂರ್ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. 400 ಸಿಖ್ ಸಂಗೀತಗಾರರ ಪ್ರದರ್ಶನ ಗಮನ ಸೆಳೆಯಿತು.