HEALTH TIPS

ಶ್ರೀಲಂಕಾದಲ್ಲಿ ತೀವ್ರವಾಗಿ ಹದಗೆಟ್ಟ ಆರ್ಥಿಕತೆ: ಬೀದಿ ದೀಪಗಳು ಬಂದ್, ಹಲವೆಡೆ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

     ಕೊಲಂಬೊ: ಶ್ರೀಲಂಕಾದ ಆರ್ಥಿಕ ಸ್ಥಿತಿ ನಿರಂತರವಾಗಿ ಕುಸಿಯ ತೊಡಗಿದೆ. ಖರ್ಚು ಕಡಿತ ಕಾರ್ಯದಲ್ಲಿ ಮಗ್ನವಾಗಿರುವ ಶ್ರೀಲಂಕಾ ಸರ್ಕಾರ, ಈಗ ವಿದ್ಯುತ್ ಉಳಿಸಲು ಬೀದಿ ದೀಪಗಳನ್ನು ಆಫ್ ಮಾಡುವ ನಿರ್ಧಾರ ಕೈಗೊಂಡಿದೆ.

     ಇಲ್ಲಿನ ಪ್ರಮುಖ ಷೇರುಪೇಟೆಯ ವಹಿವಾಟನ್ನೂ ಈಗಾಗಲೇ ಸ್ಥಗಿತಗೊಳಿಸಲಾಗಿದೆ. 22 ಮಿಲಿಯನ್ ಜನರಿರುವ ದ್ವೀಪ ರಾಷ್ಟ್ರದಲ್ಲಿ ಇಂಧನ ಆಮದು ಮಾಡಿಕೊಳ್ಳಲು ಸರ್ಕಾರಕ್ಕೆ ಸಾಕಷ್ಟು ವಿದೇಶಿ ವಿನಿಮಯವಿಲ್ಲದ ಕಾರಣ ದಿನಕ್ಕೆ 13 ಗಂಟೆಗಳ ಕಾಲ ಕತ್ತಲೆಯಲ್ಲಿ ಬದುಕು ತಳ್ಳುತ್ತಿದ್ದಾರೆ.

     ವಿದ್ಯುತ್ ಉಳಿತಾಯ ಮಾಡಲು ದೇಶಾದ್ಯಂತ ಬೀದಿ ದೀಪಗಳನ್ನು ಬಂದ್ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ವಿದ್ಯುತ್ ಸಚಿವೆ ಪವಿತ್ರಾ ವನ್ನಿಯಾರಾಚಿ ಸುದ್ದಿಗಾರರಿಗೆ ತಿಳಿಸಿದರು.

      ಆಹಾರ ಹಣದುಬ್ಬರವು ಶೇಕಡ 30.2

     ವಿದ್ಯುತ್ ಕಡಿತವು ಈಗಾಗಲೇ ಅಗತ್ಯ ವಸ್ತುಗಳ ಕೊರತೆಯಿಂದ ತತ್ತರಿಸುತ್ತಿರುವ ಶ್ರೀಲಂಕಾದ ಸಂಕಷ್ಟಗಳನ್ನು ಹೆಚ್ಚಿಸಿದೆ. ಅಲ್ಲದೆ ಪ್ರತಿಯೊಂದು ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ಚಿಲ್ಲರೆ ಹಣದುಬ್ಬರವು 18.7% ಕ್ಕೆ ಏರಿದೆ ಎಂದು ಅಂಕಿಅಂಶ ಇಲಾಖೆ ತಿಳಿಸಿದೆ.

     ಕಳೆದ ವರ್ಷ ಕರೆನ್ಸಿ ಅಪಮೌಲ್ಯೀಕರಣ ಮತ್ತು ರಾಸಾಯನಿಕ ಗೊಬ್ಬರಗಳ ಮೇಲಿನ ನಿಷೇಧದ ನಂತರ ಆಹಾರ ಹಣದುಬ್ಬರವು ಮಾರ್ಚ್‌ನಲ್ಲಿ 30.2%ಕ್ಕೆ ಏರಿಕೆಯಾಯಿತು. ಫಸ್ಟ್ ಕ್ಯಾಪಿಟಲ್ ರಿಸರ್ಚ್‌ನ ಸಂಶೋಧನಾ ಮುಖ್ಯಸ್ಥ ಡಿಮಂತ ಮ್ಯಾಥ್ಯೂ, ದಶಕವೊಂದರಲ್ಲಿ ಶ್ರೀಲಂಕಾ ತನ್ನ ಕೆಟ್ಟ ಹಣದುಬ್ಬರದ ಹಂತವನ್ನು ಅನುಭವಿಸುತ್ತಿದೆ ಎಂದು ಹೇಳಿದರು.

     ಶನಿವಾರದಂದು ಭಾರತದಿಂದ $500 ಮಿಲಿಯನ್ ಆರ್ಥಿಕ ನೆರವಿನಡಿಯಲ್ಲಿ ಡೀಸೆಲ್ ಸಾಗಣೆಯನ್ನು ನಿರೀಕ್ಷಿಸಲಾಗಿದೆ ಎಂದು ವನ್ನಿಯಾರಾಚಿ ತಿಳಿಸಿದರು. ಆದರೂ ಇದರಿಂದ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇಲ್ಲ. ಒಮ್ಮೆ ಬಂದರೆ ಲೋಡ್ ಶೆಡ್ಡಿಂಗ್ ಅವಧಿಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು. ಆದರೆ ಮಳೆ ಬಾರದೆ ಇದ್ದರೆ ಬಹುಶಃ ಮೇ ತಿಂಗಳಲ್ಲಿ ಸ್ವಲ್ಪ ಸಮಯದವರೆಗೆ ವಿದ್ಯುತ್ ಕಡಿತವನ್ನು ಮುಂದುವರಿಸಬೇಕಾಗುತ್ತದೆ. ನಾವು ಬೇರೇನೂ ಮಾಡಲು ಸಾಧ್ಯವಿಲ್ಲ. ಜಲವಿದ್ಯುತ್ ಯೋಜನೆಗಳನ್ನು ನಡೆಸುತ್ತಿರುವ ಜಲಾಶಯಗಳಲ್ಲಿನ ನೀರಿನ ಮಟ್ಟವು ದಾಖಲೆಯ ಮಟ್ಟಕ್ಕೆ ಕುಸಿದಿದೆ ಎಂದು ತಿಳಿಸಿದರು.

     ಶ್ರೀಲಂಕಾ ಅನೇಕ ದೇಶಗಳಿಂದ ಸಾಲವನ್ನು ಪಡೆದುಕೊಂಡಿದೆ. ಅಲ್ಲದೆ ಜನವರಿಯಲ್ಲಿ ವಿದೇಶಿ ವಿನಿಮಯ ಸಂಗ್ರಹವು ಶೇಕಡ 70ಕ್ಕಿಂತ ಕುಸಿದು $2.36 ಬಿಲಿಯನ್‌ಗೆ ತಲುಪಿದೆ. ವಿದೇಶಿ ವಿನಿಮಯ ಕೊರತೆಯಿಂದ ದೇಶದಲ್ಲಿರುವ ಬಹುತೇಕ ಅಗತ್ಯ ವಸ್ತುಗಳು, ಔಷಧಗಳು, ಪೆಟ್ರೋಲ್, ಡೀಸೆಲ್ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿಲ್ಲ. ದೇಶದಲ್ಲಿ ಅಡುಗೆ ಅನಿಲ ಮತ್ತು ವಿದ್ಯುತ್ ಕೊರತೆಯಿಂದಾಗಿ ಸುಮಾರು 1,000 ಬೇಕರಿಗಳನ್ನು ಮುಚ್ಚಲಾಗಿದೆ. ಅಲ್ಲದೆ ಅಳಿದುಳಿದ ಬೇಕರಿಗಳಲ್ಲಿ ಸರಿಯಾಗಿ ಉತ್ಪಾದನೆಯಾಗುತ್ತಿಲ್ಲ.

     ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆ ಹಿಂಸಾತ್ಮಕ ಪ್ರತಿಭಟನೆ
     ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಶ್ರೀಲಂಕಾದಲ್ಲಿ ಗುರುವಾರ ತಡರಾತ್ರಿ ಪ್ರತಿಭಟನೆಗಳು ಆರಂಭವಾಗಿದ್ದು, ಈ ಪ್ರತಿಭಟನೆಗಳು ಇದೀಗ ಹಿಂಸಾತ್ಮರ ರೂಪ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

     ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ನಿವಾಸದ ಮುಂದೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆ ನಡೆಸಿದ್ದಾರೆ. ರಾಜಪಕ್ಸೆ ಅವರ ರಾಜೀನಾಮೆಗೆ ಒತ್ತಾಯಿಸಿರುವ ಪ್ರತಿಭಟನಾಕಾರರು  ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ.

     ಪ್ರತಿಭಟನೆಯನ್ನು ಹತ್ತಿಕ್ಕಲು ಅರೆಸೇನಾ ಪೊಲೀಸ್ ಘಟಕ, ವಿಶೇಷ ಕಾರ್ಯಪಡೆಯನ್ನು ನಿಯೋಜಿಸಲಾಗಿತ್ತು. ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಸಿಡಿಸಲಾಗಿದೆ. ಆಕ್ರೋಶಭರಿತ ಪ್ರತಿಭಟನಾಕಾರರು ಪೊಲೀಸರ ಮೇಲೆ ಬಾಟಲಿ ಹಾಗೂ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ವರದಿಗಳು ತಿಳಿಸಿವೆ.

     ಪ್ರತಿಭಟನೆ ಹಿಂಸಾತ್ಮಕ ರೂಪಪಡೆದುಕೊಂಡ ಹಿನ್ನೆಲೆಯಲ್ಲಿ ಹಲವೆಡೆ ಕರ್ಫ್ಯೂ ಕೂಡ ಜಾರಿ ಮಾಡಲಾಗಿತ್ತು. ಹಿಂಸಾಚಾರದಲ್ಲಿ ಪೊಲೀಸರು, ಪತ್ರಕರ್ತರು ಸೇರಿದಂತೆ ಒಟ್ಟು 50 ಮಂದಿ ಗಾಯಗೊಂಡಿದ್ದು, ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    Qries