ಈರೋಡ್: ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಕಾಡಾನೆಯೊಂದು ಘಾಟ್ ರಸ್ತೆಯನ್ನು ನಿರ್ಬಂಧಿಸಿದ ಕಾರಣ 24 ವರ್ಷದ ಬುಡಕಟ್ಟು ಮಹಿಳೆಯೊಬ್ಬರು ಆಂಬ್ಯುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.
ಮಹಿಳೆಗೆ ಗುರುವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಯ ಸಂಬಂಧಿಕರು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಅರಣ್ಯದಿಂದ ಬಂದ ಕಾಡಾನೆ, ರಸ್ತೆ ಮಧ್ಯೆ ಅಡ್ಡವಾಗಿ ನಿಂತಿದೆ. ಇದರಿಂದಾಗಿ ಆಂಬ್ಯುಲೆನ್ಸ್ ನಿಲ್ಲಿಸಿದ ಡ್ರೈವರ್, ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯ್ದರೂ ಆನೆ ಅಲ್ಲಿಂದ ಕದಲಿಲ್ಲ.
ಈ ಮಧ್ಯೆ ಮಹಿಳೆಗೆ ಹೆರಿಗೆ ನೋವು ಹೆಚ್ಚಾಗಿದ್ದು, ಆಂಬ್ಯುಲೆನ್ಸ್ ನಲ್ಲಿದ್ದ ಸಿಬ್ಬಂದಿ ಮಹಿಳೆ ಮಗುವಿಗೆ ಜನ್ಮ ನೀಡಲು ನೆರವಾಗಿದ್ದಾರೆ. ಆಕೆ ಆಂಬ್ಯುಲೆನ್ಸ್ ನಲ್ಲಿಯೇ ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ಕೆಲ ನಿಮಿಷಗಳ ನಂತರ ಆನೆ ಅಲ್ಲಿಂದ ಬೇರೆಡೆ ಹೋಗಿದೆ.
ತದನಂತರ ಆರೋಗ್ಯ ಆರೋಗ್ಯ ಸಿಬ್ಬಂದಿ ಮಹಿಳೆ ಹಾಗೂ ಮಗುವನ್ನು ಗ್ರಾಮಾಂತರ ಆರೋಗ್ಯ ಕೇಂದ್ರವೊಂದಕ್ಕೆ ದಾಖಲಿಸಿದ್ದಾರೆ. ಮಗು ಹಾಗೂ ತಾಯಿ ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.