ನವದೆಹಲಿ:ಕೆಲವು ಪ್ರಕರಣಗಳಲ್ಲಿ ಸಿಬಿಐ ಕೈಗೊಂಡ ಕ್ರಮಗಳು ಹಾಗೂ ಇನ್ನು ಕೆಲವು ಪ್ರಕರಣಗಳಲ್ಲಿ ಅದು ತೋರಿಸಿರುವ ನಿಷ್ಕ್ರಿಯತೆ ಅದರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನೆತ್ತಿರುವುದರಿಂದ ವಿವಿಧ ತನಿಖಾ ಏಜೆನ್ಸಿಗಳನ್ನು ಒಂದೇ ವೇದಿಕೆಯಡಿ ತರುವ ಸ್ವತಂತ್ರ ಸಂಸ್ಥೆಯೊಂದು ರಚನೆಯಾಗಬೇಕು ಎಂಬ ಅಭಿಪ್ರಾಯವನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ವ್ಯಕ್ತಪಡಿಸಿದ್ದಾರೆ.
ಸಿಬಿಐ ಸ್ಥಾಪನಾ ದಿನದಂದು 19ನೇ ಡಿ ಪಿ ಕೊಹ್ಲಿ ಸ್ಮಾರಕ ಭಾಷಣವನ್ನು ಅವರು ನೀಡುತ್ತಿದ್ದರು. ''ಪ್ರಜಾಪ್ರಭುತ್ವ: ತನಿಖಾ ಏಜೆನ್ಸಿಗಳ ಪಾತ್ರ ಮತ್ತು ಜವಾಬ್ದಾರಿಗಳು,'' ಎಂಬ ವಿಷಯದ ಮೇಲೆ ಭಾಷಣ ನೀಡಿದ ಅವರು. ಸಿಬಿಐಗೆ ಹಲವು ಸಾಧನೆಗಳ ಶ್ರೇಯವಿದೆಯಾದರೂ ಜನರು ಕಷ್ಟದಲ್ಲಿರುವಾಗ ಪೊಲೀಸರ ಬಳಿ ಹೋಗಲು ಈಗಲೂ ಹಿಂಜರಿಯುತ್ತಾರೆ ಎಂದು ಹೇಳಿದರು.
''ನಮ್ಮಂತಹ ವೈವಿಧ್ಯತೆಯ ಸಮಾಜಕ್ಕೆ ಪ್ರಜಾಪ್ರಭುತ್ವ ಅತ್ಯಂತ ಸೂಕ್ತವಾಗಿದೆ ಹಾಗೂ ಸರ್ವಾಧಿಕಾರದ ಆಡಳಿತದಿಂದ ನಮ್ಮ ಶ್ರೀಮಂತ ವೈವಿಧ್ಯತೆಯನ್ನು ಕಾಪಾಡಲು ಸಾಧ್ಯವಿಲ್ಲ ಎಂದು ಭಾರತದ ಅನುಭವ ಸಾಬೀತು ಪಡಿಸಿದೆ,''ಎಂದು ಅವರು ಹೇಳಿದರು.
''ಆರಂಭಿಕ ಹಂತದಲ್ಲಿ ಸಿಬಿಐ ಸಾರ್ವಜನಿಕರ ಬಹಳಷ್ಟು ವಿಶ್ವಾಸ ಸಂಪಾದಿಸಿತ್ತು. ಸಿಬಿಐ ನಿಷ್ಪಕ್ಷಪಾತದ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದುದರಿಂದ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಲು ನ್ಯಾಯಾಂಗಕ್ಕೆ ಕೂಡ ಮನವಿಗಳ ಮಹಾಪೂರವೇ ಹರಿದು ಬರುತ್ತಿದ್ದವು. ಆದರೆ ವರ್ಷಗಳು ಕಳೆದ ಹಾಗೆ ಅದರ ಕ್ರಮಗಳು ಹಾಗೂ ನಿಷ್ಕ್ರಿಯತೆ ಅದರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನೆತ್ತಿದೆ, ಆದುದರಿಂದ ಸಿಬಿಐ, ಇಡಿ ಮುಂತಾದ ಸಂಸ್ಥೆಗಳನ್ನು ಒಂದೇ ವೇದಿಕೆಯಡಿ ತರುವ ಸ್ವಾಯತ್ತ ಸಂಸ್ಥೆಯ ಸೃಷ್ಟಿಯಾಗಬೇಕು, ಈ ಸಂಸ್ಥೆಯ ಮುಖ್ಯಸ್ಥರನ್ನು ಸಿಬಿಐ ನಿರ್ದೇಶಕರನ್ನು ನೇಮಕ ಮಾಡುವ ಉನ್ನತಾಧಿಕಾರ ಸಮಿತಿಯಂತಹ ಸಮಿತಿ ಮುಖಾಂತರ ಆರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.