ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ ಮತ್ತು ಆರ್ಥಿಕವಾಗಿ ಪ್ರಬಲವಾಗಿರುವ ವಿಶ್ವದ ಮೊದಲ ಮೂರು ದೇಶಗಳಲ್ಲಿ ಭಾರತವೂ ಒಂದು ಎಂದು ಪ್ರತಿಪಾದಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ದೇಶಕ್ಕೆ ಹಾನಿಯಾದರೆ ಯಾರನ್ನೂ ಬಿಡುವುದಿಲ್ಲ ಎಂದು ಶುಕ್ರವಾರ ಚೀನಾಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಇಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ-ಅಮೆರಿಕನ್ ಸಮುದಾಯವನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಭಾರತ "ಶೂನ್ಯ ಮೊತ್ತದ ಆಟ" ದ ರಾಜತಾಂತ್ರಿಕತೆಯನ್ನು ನಂಬುವುದಿಲ್ಲ ಮತ್ತು ಒಂದು ದೇಶದೊಂದಿಗಿನ ಸಂಬಂಧವು ಮತ್ತೊಂದು ದೇಶದ ವೆಚ್ಚದ ಮೇಲೆ ಅವಲಂಬಿತವಾಗಿರುವುದಿಲ್ಲ ಎಂದು ಅಮೆರಿಕಗೆ ಸೂಕ್ಷ್ಮ ಸಂದೇಶ ಕಳುಹಿಸಿದ್ದಾರೆ.
ಭಾರತ- ಅಮೆರಿಕ '2+2' ಸಚಿವರ ಮಟ್ಟದ ಮಾತುಕತೆಯ ನಾಲ್ಕನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ರಾಜನಾಥ್ ಸಿಂಗ್ ವಾಷಿಂಗ್ಟನ್ ಗೆ ತೆರಳಿದ್ದು, ನಮ್ಮ ಸೈನಿಕರು ಏನು ಮಾಡಿದರು ಮತ್ತು ನಾವು(ಸರ್ಕಾರ) ಯಾವ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ನಾನು ಬಹಿರಂಗವಾಗಿ ಹೇಳಲಾರೆ. ಆದರೆ ಭಾರತಕ್ಕೆ ಹಾನಿಯಾದರೆ ಭಾರತ ಯಾರನ್ನೂ ಬಿಡುವುದಿಲ್ಲ ಎಂಬ ಸಂದೇಶ(ಚೀನಾಗೆ) ಹೋಗಿದೆ ಎಂದು ನಾನು ಖಂಡಿತವಾಗಿ ಹೇಳಬಲ್ಲೆ ಎಂದರು.
ಮೇ 5, 2020 ರಂದು ಪ್ಯಾಂಗೊಂಗ್ ಸರೋವರದ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವಿನ ಲಡಾಖ್ ಗಡಿ ಬಿಕ್ಕಟ್ಟು ಮತ್ತಷ್ಟು ಭುಗಿಲೆದ್ದಿತ್ತು.