ನವದೆಹಲಿ: ಹರ್ಯಾಣ ಕಾಂಗ್ರೆಸ್ ವಿಭಾಗವನ್ನು ಪುನಾರಚನೆ ಮಾಡಲಾಗಿದ್ದು, ಮಾಜಿ ಶಾಸಕ ಉದಯ್ ಭಾನ್ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಈ ಹಿಂದಿದ್ದ ಕಾಂಗ್ರೆಸ್ ಕುಮಾರಿ ಸೆಲ್ಜಾ ಅವರ ಉತ್ತರಾಧಿಕಾರಿಯಾಗಿ ಮಾಜಿ ಶಾಸಕ ಉದಯ್ ಭಾನ್ ಕಾರ್ಯನಿರ್ವಹಿಸಲಿದ್ದು ನಾಲ್ವರು ಕಾರ್ಯಾಧ್ಯಕ್ಷರನ್ನು ಹೊಂದಿರಲಿದ್ದಾರೆ.
ರಾಜ್ಯ ಘಟಕದ ಪುನಾರಚನೆ ವಿಷಯ ಹಲವು ವಾರಗಳಿಂದ ಚರ್ಚೆಯಾಗುತ್ತಿತ್ತು. ಶೃತಿ ಚೌಧರಿ, ರಾಮ್ ಕಿಶನ್ ಗುಜ್ಜಾರ್, ಜಿತೇಂದ್ರ ಕುಮಾರ್ ಭಾರದ್ವಾಜ್, ಸುರೇಶ್ ಗುಪ್ತಾ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರ ಹುದ್ದೆಗೆ ಕುಮಾರಿ ಸ್ಲೆಜಾ ನೀಡಿರುವ ರಾಜೀನಾಮೆಯನ್ನು ಕಾಂಗ್ರೆಸ್ ಅಧ್ಯಕ್ಷರು ಸ್ವೀಕರಿಸಿದ್ದು, ತಕ್ಷಣದಿಂದಲೇ ಈ ಸ್ವೀಕೃತಿ ಜಾರಿಗೆ ಬರಲಿದೆ ಎಂದು ಪಕ್ಷದ ಹಿರಿಯ ನಾಯಕ ಕೆ.ಸಿ ವೇಣುಗೋಪಾಲ್ ತಿಳಿಸಿದ್ದಾರೆ.
ಸೆಲ್ಜಾ ಕೆಲವು ದಿನಗಳ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮ್ಮನ್ನು ಪಕ್ಷದ ನಿಜವಾದ ಯೋಧರೆಂದು ಹೇಳಿಕೊಂಡಿದ್ದಾರೆ. "ನಾನು ಪಕ್ಷದ ಯೋಧ, ಹೈಕಮಾಂಡ್ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ನಾವು ಎಲ್ಲರೂ ಒಟ್ಟಿಗೆ ಕಾರ್ಯನಿರ್ವಹಿಸುತ್ತೇವೆ" ಎಂದು ಸೆಲ್ಜಾ ತಿಳಿಸಿದ್ದಾರೆ.