ಕಾಸರಗೋಡು: ಪತ್ರಕರ್ತ, ಲೇಖಕ ರವಿ ನಾಯ್ಕಾಪು ಅವರಿಗೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯ ಗರಿ. ನವದೆಹಲಿಯ ಇಂಡಿಯನ್ ಜರ್ನಲಿಸ್ಟ್ ಕಂಪೇಡಿಯಂ ಪತ್ರಿಕಾ ರಂಗದ ಸಮಗ್ರ ಸಾಧನೆಗೆ ಕೊಡಮಾಡುವ ಈ ಸಾಲಿನ ಪ್ರಶಸ್ತಿಗೆ ಕಾಸರಗೋಡಿನ ಪತ್ರಕರ್ತ, ಲೇಖಕ ರವಿ ನಾಯ್ಕಾಪು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಇಂಡಿಯನ್ ಜರ್ನಲಿಸ್ಟ್ ಕಂಪೇಡಿಯಂ ಅಧ್ಯಕ್ಷ ಗ್ಯಾನ್ ಪ್ರಕಾಶ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ತಿಂಗಳ 20 ರಂದು ಗೋವಾ ಪಂಜಿಮ್ ನಲ್ಲಿರುವ ತಾಜ್ ವಿಹಾರ್ ಹೊಟೇಲ್ನಲ್ಲಿ ನಡೆಯಲಿರುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಮುಖರು ಭಾಗವಹಿಸಲಿದ್ದಾರೆ.
ಕಳೆದ ಎರಡು ದಶಕಗಳಿಂದ ಪೂರ್ಣಕಾಲಿಕ ಪತ್ರಕರ್ತನಾಗಿರುವ ರವಿ ನಾಯ್ಕಾಪು ಅವರು ವಿವಿಧ ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ವರದಿಗಾರ, ಉಪ ಸಂಪಾದಕ, ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನೂರಾರು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ದಾನಗಂಗೆ, ಸ್ನೇಹಗಂಗೆ, ಗಾನಗಂಗೆ, ಸಾವಿರದ ಸಾಧಕ ಎಂಬಿವುಗಳು ಅವರ ಪ್ರಕಟಿತ ಕೃತಿಗಳು. ಇವರ "ಸ್ನೇಹಗಂಗೆ" ಯು ಶ್ರೇಷ್ಠ ಸಮಾಜಮುಖಿ ಕೃತಿಗಿರುವ ಪುರಸ್ಕಾರಕ್ಕೆ ಪಾತ್ರವಾಗಿದೆ. ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕದ ಕೋಶಾಧಿಕಾರಿಯೂ ಕನ್ನಡ ಕಾರ್ಯಕ್ರಮಗಳ ನಿರೂಪಕರೂ ಆಗಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ರವಿ ನಾಯ್ಕಾಪು ಅವರನ್ನು ವಿವಿಧ ಕನ್ನಡಪರ ಸಂಘಟನೆಗಳು ಅಭಿನಂದಿಸಿವೆ.