ಕಾಸರಗೋಡು: ಬೇಸಿಗೆ ಹಿನ್ನೆಲೆಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶುದ್ಧ ನೀರಿನ ಮೂಲಗಳನ್ನು ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಬಳಸಲು ಅವಕಾಶ ಕಲ್ಪಿಸಬೇಕು ಎಂದು ಹೊಸದುರ್ಗ ತಾಲೂಕು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಒತ್ತಾಯಿಸಲಾಯಿತು. ಇತರ ಪಂಚಾಯಿತಿ ಹಾಗೂ ನಗರಸಭಾ ವ್ಯಾಪ್ತಿಗೆ ನೀರು ಸಾಗಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಆಗ್ರಹ ಮುಂದಿಡಲಾಗಿದೆ.
ಕಂದಾಯ ಇಲಾಖೆ ವ್ಯಾಪ್ತಿಯ ಪುಲ್ಲೂರು-ಪೆರಿಯ ಪಂಚಾಯಿತಿಯಲ್ಲಿ 13 ಸೆಂಟ್ಸ್ ಜಾಗವನ್ನು ಪಂಚಾಯಿತಿಗೆ ಹಸ್ತಾಂತರಿಸಬೇಕು, ಹರಿಪುರ ಜಲಾನಯನ ಪ್ರದೇಶದಲ್ಲಿ ರಸ್ತೆ ಪಿಡಬ್ಲ್ಯುಡಿ ಸ್ವಾಧೀನಪಡಿಸಿಕೊಳ್ಳಬೇಕು ಮತ್ತು ರಸ್ತೆ ಅಗಲಗೊಳಿಸಬೇಕು ಎಂಬ ಬೇಡಿಕೆ ಮುಂದಿಡಲಾಯಿತು. ಕಾಞಂಗಾಡು ಪೇಟೆಯಲ್ಲಿ ಬೀದಿ ದೀಪಗಳ ದುರಸ್ತಿ ಕಾರ್ಯವನ್ನು ಪಾಲಿಕೆಗೆ ವಹಿಸುವಂತೆ ಆಗ್ರಹಿಸಲಾಯಿತು. ಕೆಎಸ್‍ಟಿಪಿ ರಸ್ತೆಗಳಲ್ಲಿ ಬೀದಿ ದೀಪಗಳ ನಿರ್ವಹಣೆಗೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಕೆಎಸ್‍ಟಿಪಿ ಪ್ರತಿನಿಧಿ ತಿಳಿಸಿದರು. ಚಾಲಿಂಗಕಲ್‍ನಲ್ಲಿ ಕುಟುಂಬ ಕಲ್ಯಾಣ ಕೇಂದ್ರ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಂತೆ ಹಾಗೂ ಚಾಲಿಂಗಲ್ ಕಮ್ಮಡತ್ ಪಾರಾದಲ್ಲಿ ನಕಲಿ ಮದ್ಯ ಮಾರಾಟ ತಡೆಯುವಂತೆ ಆಗ್ರಹಿಸಲಾಯಿತು.
ಶಾಸಕ ಇ. ಚಂದ್ರಶೇಖರನ್ ಉದ್ಘಾಟಿಸಿದರು. ಪಂಚಾಯಿತಿ ಅಧ್ಯಕ್ಷ ಎಂ. ಕುಮಾರನ್ ಅಧ್ಯಕ್ಷತೆ ವಹಿಸಿದ್ದರು. ಪುಲ್ಲೂರು ಪೆರಿಯ ಪಂಚಾಯಿತಿ ಅಧ್ಯಕ್ಷ ಸಿ.ಕೆ.ಅರವಿಂದನ್, ಉದುಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ, ಪಟ್ಣ ಪಂಚಾಯಿತಿ ಅಧ್ಯಕ್ಷ ಪಿ.ವಿ.ಮಹಮ್ಮದ್ ಅಸ್ಲಂ, ಜನಪ್ರತಿನಿಧಿಗಳು, ಕಾರ್ಯನಿರ್ವಹಣಾಧಿಕಾರಿಗಳು ಮಾತನಾಡಿದರು. ಹೊಸದುರ್ಗ ತಹಸೀಲ್ದಾರ್ ಮಣಿರಾಜ್ ಸ್ವಾಗತಿಸಿದರು.