ಬೆಂಗಳೂರು; ಸದಭಿರುಚಿಯ ಹಾಗೂ ಮಾಹಿತಿಪೂರ್ಣ ಮತ್ತು ಗಮನ ಸೆಳೆಯುವ ಟ್ವೀಟ್ ಮಾಡುವುದರಲ್ಲಿ ಉದ್ಯಮಿ ಆನಂದ ಮಹೀಂದ್ರಾ ಸದಾ ಮುಂದು. ಈ ಕಾರಣಕ್ಕಾಗಿಯೇ ಅವರು ಇತರ ಉದ್ಯಮಿಗಳಿಗಿಂತ ಭಿನ್ನವಾಗಿ ಕಾಣುತ್ತಾರೆ.
ಇತ್ತೀಚಿನ ತಮ್ಮ ಒಂದು ಟ್ವೀಟ್‌ನಲ್ಲಿ ಜಗತ್ತಿನ ಸಿರಿವಂತ ಉದ್ಯಮಿ ಎಲೊನ್ ಮಸ್ಕ್ ಅವರ ಕಾಲೆಳದಿದ್ದಾರೆ ಆನಂದ್ ಮಹೀಂದ್ರಾ. ಅವರ ಈ ಟ್ವೀಟ್ ಈಗ ವೈರಲ್ ಕೂಡ ಆಗಿದೆ.
ಹೇಳಿ ಕೇಳಿ ಮಸ್ಕ್ ಅವರ ಟೆಸ್ಲಾ ಕಾರುಗಳು ಜಗತ್ತಿನಲ್ಲಿಯೇ ಅತ್ಯಾಧುನಿಕ ಎಲೆಕ್ಟ್ರಿಕ್ ಕಾರುಗಳು ಎಂದು ಹೆಸರುವಾಸಿಯಾಗಿವೆ. ಚಾಲಕ ರಹಿತ ಹಾಗೂ ಸ್ವಯಂಚಾಲಿತ ವ್ಯವಸ್ಥೆ ಹೊಂದಿರುವ ಕಾರುಗಳಾಗಿವೆ ಟೆಸ್ಲಾ. ಇದೇ ವಿಚಾರಕ್ಕೆ ಆನಂದ ಮಹೀಂದ್ರಾ ಅವರು ಮಸ್ಕ್ ಅವರಿಗೆ ಕಾಲೆಳದಿದ್ದಾರೆ.
ಭಾರತದ ಕೃಷಿ ವ್ಯವಸ್ಥೆಯಲ್ಲಿ ಎತ್ತುಗಳು ಹಾಗೂ ಚಕ್ಕಡಿಗಳು ರೈತರ ಒಡನಾಡಿಗಳೇ ಸೈ. ಈ ರೀತಿಯ ಚಕ್ಕಡಿ ಚಿತ್ರ ಹಂಚಿಕೊಂಡಿರುವ ಮಹೀಂದ್ರಾ ಅವರು, 'ಇದೇ ನೋಡಿ ಮೂಲ ಟೆಸ್ಲಾ ಕಾರ್. ಇದಕ್ಕೆ ಇಂಧನ ಬೇಕಿಲ್ಲ, ಸ್ವಯಂಚಾಲಿತ ವ್ಯವಸ್ಥೆ ಬೇಕಿಲ್ಲ. ಯಾವುದೇ ಮಾಲಿನ್ಯ ಇಲ್ಲ, ಗೂಗಲ್ ಮ್ಯಾಪ್ ಕೂಡ ಬೇಕಿಲ್ಲ. ಸಂಪೂರ್ಣ ವಿಶ್ರಾಂತಿ ಹಾಗೂ ನೆಮ್ಮದಿ' ಎಂದು ರೈತರು ಚಕ್ಕಡಿಯಲ್ಲಿ ಮಲಗಿಕೊಂಡು ಹೊಲಕ್ಕೆ ಹೋಗುತ್ತಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.
ಇಂದಿಗೂ ಕೂಡ ಭಾರತದ ಅನೇಕ ಹಳ್ಳಿಗಳಲ್ಲಿ ರೈತರು ಎತ್ತುಗಳನ್ನು ಚಕ್ಕಡಿಗೆ ಕೊರಳು ಕಟ್ಟಿ ಬಿಟ್ಟರೆಂದರೆ ಎತ್ತುಗಳು ತಾವೇ ತಮ್ಮ ಹೊಲಗಳಿಗೆ ಹೋಗುತ್ತವೆ. ರೈತರು ಮಾತ್ರ ಚಕ್ಕಡಿಯಲ್ಲಿ ಅರಾಮಾಗಿ ಮಲಗಿಕೊಂಡು ಹೋಗುವುದನ್ನು ನೋಡಬಹುದು.