ನವದೆಹಲಿ: 'ದೇಶದ ಎಲ್ಲಾ ರಾಜ್ಯಗಳ ಜನರು ಪರಸ್ಪರ ಸಂಪರ್ಕಕ್ಕಾಗಿ ಹಿಂದಿ ಭಾಷೆಯನ್ನು ಬಳಸಬೇಕು. ಹಿಂದಿ ಯನ್ನು ಇಂಗ್ಲಿಷ್‌ಗೆ ಪರ್ಯಾಯ ಭಾಷೆಯಾಗಿ ಒಪ್ಪಿಕೊಳ್ಳಬೇಕು' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.
ಕೇಂದ್ರ ಸಚಿವ ಸಂಪುಟದ ಶೇ 70ರಷ್ಟು ಕಾರ್ಯಸೂಚಿಗಳನ್ನು ಈಗ ಹಿಂದಿಯಲ್ಲೇ ಸಿದ್ಧಪಡಿಸಲಾಗುತ್ತದೆ. ದೇಶದ ಅಧಿಕೃತ ಭಾಷೆಯಾದ ಹಿಂದಿಯನ್ನು ದೇಶವನ್ನು ಒಗ್ಗೂಡಿಸುವ ಸಾಧನವಾಗಿ ಮಾಡುವ ಸಮಯ ಈಗ ಬಂದಿದೆ' ಎಂದು ಅವರು ಸಭೆಯಲ್ಲಿ ಘೋಷಿಸಿದ್ದಾರೆ.
9ನೇ ತರಗತಿವರೆಗೆ ಬೋಧನೆ: 'ಅಧಿಕೃತ ಭಾಷಾ ಸಮಿತಿಯು ಈವರೆಗೆ 11 ವರದಿಗಳನ್ನು ನೀಡಿದೆ. ಆ ವರದಿಗಳನ್ನು ಹಂತ ಹಂತವಾಗಿ ಜಾರಿಗೆ ತರುವ ಸಂಬಂಧ ಇದೇ ಜುಲೈನಲ್ಲಿ ಸಭೆ ನಡೆಸಿ' ಎಂದು ಸಮಿತಿಯ ಅಧ್ಯಕ್ಷರೂ ಆಗಿರುವ ಅಮಿತ್ ಶಾ ಅವರು, ಸಮಿತಿಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
'9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿನ ಜ್ಞಾನವನ್ನು ನೀಡುವುದಕ್ಕೆ ಒತ್ತು ನೀಡಬೇಕು. ಹಿಂದಿ ಬೋಧನಾ ಪರೀಕ್ಷೆಗಳಿಗೆ ಆದ್ಯತೆ ನೀಡಬೇಕು. ಹಿಂದಿ ಪದಕೋಶವನ್ನು ಪರಿಷ್ಕರಿಸಿ, ಮರುಮುದ್ರಣ ಮಾಡಬೇಕು' ಎಂದು ಶಾ ಅವರು ಸಮಿತಿಗೆ ಸೂಚಿಸಿದ್ದಾರೆ.
ಈ ಸಮಿತಿಯ ವರದಿಗಳ ಅನುಷ್ಠಾನವನ್ನು ಪರಿಶೀಲಿಸಲು ಸಮಿತಿಯ ಸದಸ್ಯರ ಸಭೆ ಕರೆಯಬೇಕು ಎಂದು ಹೇಳಿರುವ ಶಾ, 'ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಿಂದಿ ಬೋಧನೆಯನ್ನು ಉತ್ತೇಜಿಸಲು 22,000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ರಾಜ್ಯಗಳ ಸರ್ಕಾರಗಳು 10ನೇ ತರಗತಿವರೆಗೆ ಹಿಂದಿ ಕಲಿಕೆಯನ್ನು ಕಡ್ಡಾಯ ಮಾಡಲು ಒಪ್ಪಿಗೆ ನೀಡಿವೆ. ಈ ರಾಜ್ಯಗಳ ಒಂಬತ್ತು ಬುಡಕಟ್ಟು ಸಮುದಾಯಗಳು ತಮ್ಮ ಭಾಷೆಯಲ್ಲಿನ ಸಾಹಿತ್ಯವನ್ನು ಹಿಂದಿಯ ದೇವನಾಗರಿ ಲಿಪಿಗೆ ಪರಿವರ್ತಿಸಿವೆ' ಎಂದು ಶಾ ಹೇಳಿದ್ದಾರೆ.
'ಹಿಂದಿ ಹೇರಿಕೆ ನಿಲ್ಲಿಸಿ'
ಅಮಿತ್ ಶಾ ಅವರ ಈ ಹೇಳಿಕೆ ಸುದ್ದಿಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ 'ಹಿಂದಿ ಹೇರಿಕೆ ನಿಲ್ಲಿಸಿ' ಎಂಬ ಅಭಿಯಾನ ಆರಂಭವಾಗಿದೆ. ದ್ರಾವಿಡ ಭಾಷಾ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ನೆಟ್ಟಿಗರು ಈ ಅಭಿಯಾನವನ್ನು ತೀವ್ರಗೊಳಿಸಿದ್ದಾರೆ.
#stopHindiImposition ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಲಾಗುತ್ತಿದೆ. ಶುಕ್ರವಾರ ಮಧ್ಯಾಹ್ನದ ನಂತರ ಈ ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್‌ನಲ್ಲಿತ್ತು. ಈ ಹ್ಯಾಷ್‌ಟ್ಯಾಗ್‌ನ ಜತೆಗೆ ಕನ್ನಡಿಗರು 'ನನಗೆ ಹಿಂದಿ ಗೊತ್ತಿಲ್ಲ ಹೋಗೋ', ತಮಿಳರು 'ಎನಕು ಹಿಂದಿ ತೆರಿಯಾದು ಪೋಡಾ', ಮಲಯಾಳಿಗಳು 'ಎನಿಕ್ಕ್ ಹಿಂದಿ ಅರಿಯಿಲ್ಲಾ ಪೋ' ಮತ್ತು ತೆಲುಗಿನವರು 'ನಾಕು ಹಿಂದಿ ತೆಲಿಯಾದು ಪೋರಾ' ಎಂದು ತಮ್ಮ ಭಾಷೆಗಳಲ್ಲಿ ಹ್ಯಾಷ್‌ಟ್ಯಾಗ್ ಹಾಕುತ್ತಿದ್ದಾರೆ.