ನವದೆಹಲಿ: ಭಾರತದಲ್ಲಿ ಇನ್ನು ಹತ್ತು ವರ್ಷಗಳಲ್ಲಿ ಒಂದು ದಾಖಲೆ ಬರೆಯಲಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಭರವಸೆ ನೀಡಿದ್ದಾರೆ. ಗುಜರಾತ್ನ ಭುಜ್ ಜಿಲ್ಲೆಯಲ್ಲಿನ ಕೆ.ಕೆ. ಪಟೇಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಇಂದು ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಉದ್ಘಾಟನೆ ಮಾಡಿ ಅವರು ಈ ವಿಷಯ ತಿಳಿಸಿದರು.
ಎರಡು ದಶಕಗಳ ಹಿಂದೆ ಗುಜರಾತ್ನಲ್ಲಿ 9 ವೈದ್ಯಕೀಯ ಕಾಲೇಜುಗಳು ಮತ್ತು 1,100 ಸೀಟುಗಳಷ್ಟೇ ಇದ್ದವು. ಇಂದು 36ಕ್ಕೂ ಅಧಿಕ ವೈದ್ಯಕೀಯ ಕಾಲೇಜುಗಳು, 6 ಸಾವಿರ ಸೀಟುಗಳು ಗುಜರಾತ್ನಲ್ಲಿವೆ. ಇನ್ನು 2001ರಲ್ಲಿ ಸಂಭವಿಸಿದ್ದ ಭೂಕಂಪದಿಂದಾದ ಹಾನಿಯನ್ನು ಸ್ಮರಿಸಿಕೊಂಡ ಅವರು, ಇಲ್ಲಿನ ಜನರು ತಮ್ಮ ಪರಿಶ್ರಮದಿಂದ ಹೊಸ ಭವಿಷ್ಯವನ್ನು ಬರೆದುಕೊಳ್ಳುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲರಿಗೂ ವೈದ್ಯಕೀಯ ಶಿಕ್ಷಣ ನಿಲುಕುವಂತೆ ಮಾಡುವುದಿರಲಿ ಅಥವಾ ದೇಶದ ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಲಿ ಎಲ್ಲದರಲ್ಲೂ ಸರ್ಕಾರದ ಪ್ರಯತ್ನ ನಡೆಯುತ್ತಿದ್ದು, ಇನ್ನು ಹತ್ತು ವರ್ಷಗಳಲ್ಲಿ ಹೊಸ ವೈದ್ಯರ ಸಂಖ್ಯೆಯಲ್ಲಿ ದೇಶ ದಾಖಲೆ ಬರೆಯಲಿದೆ ಎಂದು ಪ್ರಧಾನಿ ತಿಳಿಸಿದರು.