ತಿರುವನಂತಪುರ : ರಾಜಧಾನಿ ತಿರುವನಂತಪುರದಲ್ಲಿ ಸೋಮವಾರ ಏಕಾಏಕಿ ಸುರಿದ ಮಳೆಗೆ ಸಂಪೂರ್ಣ ನಗರ ಜಲಾವೃತಗೊಳ್ಳುವಂತಾಯಿತು. ತಿರುವನಂತಪುರ ಆಸುಪಾಸು ಸಿಡಿಲಿನಬ್ಬರದೊಂದಿಗೆ ಬಿರುಸಿನ ಗಾಳಿ, ಮಳೆಗೆ ನಗರದ ಜನತೆ ಬೆಚ್ಚಿಬೀಳುವಂತಾಗಿತ್ತು. ತಾಸೊನೊಳಗೆ ನಗರದ ಚರಂಡಿಗಳು ತುಂಬಿಕೊಂಡು ರಸ್ತೆಯಲ್ಲಿ ಮಳೆನೀರು ದಾಸ್ತಾನುಗೊಳ್ಳುವಂತಾಗಿತ್ತು.
ವಿವಿಧೆಡೆ ಗಾಳಿಗೆ ಮರಗಳು ರಸ್ತೆಗೆ ಬಿದ್ದ ಪರಿಣಾಮ ವಾಹನಸಂಚಾರಕ್ಕೂ ತಡೆಯುಂಟಾಗಿತ್ತು. ವಿದ್ಯುತ್ ಪೂರೈಕೆಯಲ್ಲೂ ಅಸ್ತವ್ಯಸ್ತವುಂಟಾಗಿತ್ತು. ಸ್ಮಾರ್ಟ್ ಸಿಟಿ ಅನ್ವಯ ಕೇಬಲ್ ಅಳವಡಿಸಲು ತಗೆಯಲಾದ ಹೊಂಡಗಳಲ್ಲಿ ನೀರು ತುಂಬಿಕೊಂಡು ಜನರ ಸಂಚಾರಕ್ಕೂ ಅಡಚಣೆಯುಂಟಾಯಿತು. ಬಿರುಸಿನ ಗಾಳಿಗೆ ಫ್ಲೆಕ್ಸ್, ಬ್ಯಾನರ್, ಬೋರ್ಡ್‍ಗಳು ಎಲ್ಲೆಂದರಲ್ಲಿ ಚದುರಿಬಿದ್ದಿದೆ. ಅಪಾರ ಕೃಷಿಹಾನಿಯೂ ಉಂಟಾಗಿದೆ. ಕೇರಳದ ವಿವಿಧೆಡೆ ಮುಂದಿನ ಐದು ದಿವಸಗಳ ಕಾಲ ಬಿರುಸಿನ ಗಾಳಿ, ಸಿಡಿಲಿನಿಂದ ಕೂಡಿದ ಮಳೆಯಾಗುವ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಗಾಳಿ ಹಾಗೂ ಮಳೆ ಬಿರುಸುಗೊಳ್ಳುವ ಸಾಧ್ಯತೆ ಬಗ್ಗೆಯೂ ಹವಾಮಾಣ ಇಲಾಖೆ ಮುನ್ಸೂಚನೆ ನೀಡಿದೆ.