ನವದೆಹಲಿ: ದೇಶದ ಆಯುಷ್ ಉತ್ಪನ್ನಗಳ ಗುಣಮಟ್ಟ ದೃಢೀಕರಿಸುವುದಕ್ಕಾಗಿ ಶೀಘ್ರದಲ್ಲೇ ‘ಆಯುಷ್ ಮಾರ್ಕ್’ ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗುಜರಾತ್‌ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಜಾಗತಿಕ ಆಯುಷ್ ಹೂಡಿಕೆ ಶೃಂಗಸಭೆಯ ಉದ್ಘಾಟನೆ ಬಳಿಕ ಅವರು ಮಾತನಾಡಿದ ಅವರು, 'ಆಯುಷ್ ಉತ್ಪನ್ನಗಳ ಗುಣಮಟ್ಟಕ್ಕೆ ಕಾರಣವಾಗುವ ಸಾಂಪ್ರದಾಯಿಕ ಔಷಧ ಉತ್ಪನ್ನಗಳನ್ನು ಗುರುತಿಸಿ ದೃಢೀಕರಿಸಲಾಗುವುದು. ಸಾಂಪ್ರದಾಯಿಕ ಚಿಕಿತ್ಸೆಗಳಿಗಾಗಿ ಭಾರತಕ್ಕೆ ಬರುವವರಿಗಾಗಿ ‘ಆಯುಷ್ ವೀಸಾ’ ಕೆಟಗರಿಯನ್ನೂ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಆಯುಷ್‌ನಲ್ಲಿ ಹೂಡಿಕೆ ಮತ್ತು ಸಂಶೋಧನೆಗೆ ಮೋದಿ ಕರೆ
ಇದೇ ವೇಳೆ ಆಯುಷ್‌ನಲ್ಲಿ ಸಂಶೋಧನೆ ಮತ್ತು ಹೂಡಿಕೆಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ರೈತರ ಆದಾಯ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.
'ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಆಯುಷ್ ಔಷಧಿಗಳು ವ್ಯಾಪಕ ಕೊಡುಗೆ ನೀಡಿವೆ. ಆಯುಷ್‌ನಲ್ಲಿ ಹೂಡಿಕೆ ಮತ್ತು ಸಂಶೋಧನೆಯನ್ನು ಹೆಚ್ಚಿಸುವ ಅಗತ್ಯವಿದೆ. ಇದರಿಂದ ವಿಶ್ವದ ಹೆಚ್ಚಿನ ಜನಸಂಖ್ಯೆಗೆ ಉತ್ತಮ ಮತ್ತು ಕೈಗೆಟುಕುವ ಆರೋಗ್ಯ ಸೇವೆಗಳನ್ನು ಒದಗಿಸಬಹುದು. ಆಯುಷ್ ಕ್ಷೇತ್ರದಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದರಿಂದ ರೈತರ ಆದಾಯವೂ ಹೆಚ್ಚುತ್ತದೆ ಹಾಗೂ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ಕಂಪನಿಗಳು ಕೋವಿಡ್ ಲಸಿಕೆ ಅಭಿವೃದ್ಧಿಗೆ ಕೈಗೊಂಡ ಕ್ರಮಗಳ ಬಗ್ಗೆ ಉಲ್ಲೇಖಿಸಿದ ಮೋದಿ, ಬಂಡವಾಳದ ಲಭ್ಯತೆಯು ಯಾವುದೇ ಕ್ಷೇತ್ರದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಲಸಿಕೆಯನ್ನು ಅಭಿವೃದ್ಧಿಪಡಿಸಲು ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ತೀವ್ರವಾಗಿ ಹೋರಾಡಲು ಸಂಬಂಧಪಟ್ಟ ಕಂಪನಿಗಳಿಗೆ ಬಂಡವಾಳ ಲಭ್ಯಗೊಳಿಸವಂತಹ ಕಾರ್ಯಗಳನ್ನು ಮಾಡಲಾಯಿತು ಎಂದು ಹೇಳಿದರು.
ಆಯುಷ್ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸುವ ಅಗತ್ಯವಿದ್ದು, ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಒತ್ತು ನೀಡುವುದರಿಂದ ಹೊಸ ಸಾಧ್ಯತೆಗಳು ತೆರೆದುಕೊಳ್ಳಲಿವೆ ಎಂದರು. ಆಯುಷ್‌ನ ಜಾಗತಿಕ ಮಾರುಕಟ್ಟೆಯನ್ನು ಉಲ್ಲೇಖಿಸಿದ ಅವರು, 2014 ರಲ್ಲಿ ಇದು ಕೇವಲ ಮೂರು ಬಿಲಿಯನ್ ಡಾಲರ್‌ಗಳಷ್ಟಿತ್ತು, ಅದು ಈಗ 18 ಬಿಲಿಯನ್ ಡಾಲರ್‌ಗೆ ಏರಿದೆ ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಇದು ತೀವ್ರಗತಿಯಲ್ಲಿ ಹೆಚ್ಚಾಗಲಿದ್ದು, ಮುಂದಿನ 25 ವರ್ಷಗಳಲ್ಲಿ ಆಯುಷ್ ವಲಯವು ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆಯನ್ನು ನೀಡುತ್ತದೆ ಎಂದು ತಿಳಿಸಿದರು.
ವಿಶ್ವದಲ್ಲಿ ಆಯುಷ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಆಯುಷ್‌ನ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಆಯುಷ್ ಸ್ಟಾರ್ಟಪ್‌ಗಳಿಗೆ ಸರ್ಕಾರ ಉತ್ತೇಜನ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಆಯುಷ್ ಸ್ಟಾರ್ಟಪ್‌ನಲ್ಲೂ ಯುನಿಕಾರ್ನ್ ಆಗಲಿದೆ ಎಂದು ಹೇಳಿದರು.
ಭಾರತವು ಗಿಡಮೂಲಿಕೆ ಔಷಧಿಗಳ ಅಗಾಧವಾದ ಸಂಪತನ್ನು ಭಾರತ ಹೊಂದಿದೆ. ಇದಕ್ಕೆ “ಹಸಿರು ಚಿನ್ನ” ಎಂದು ಕರೆದ ಪ್ರಧಾನಿಗಳು, ಆಯುಷ್ ಮಾರುಕಟ್ಟೆಯನ್ನು ಆಧುನೀಕರಣಗೊಳಿಸಲು ಸರಕಾರ ಪ್ರಯತ್ನಿಸುತ್ತಿದೆ. ಸುಮಾರು 50 ದೇಶಗಳೊಂದಿಗೆ ಆಯುಷ್ ಉತ್ಪನ್ನಗಳ ವಿನಿಮಯದ ಒಪ್ಪಂದಗಳಿಗೆ ಸರ್ಕಾರ ಸಹಿ ಹಾಕಿದೆ. ಇದಲ್ಲದೇ ಆಯುಷ್ ಟ್ರೇಡ್‌ಮಾರ್ಕ್ ಅನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಆಯುಷ್ ಉತ್ಪನ್ನಗಳ ಪ್ರಮಾಣೀಕರಣಕ್ಕೆ ಕಾರಣವಾಗುತ್ತದೆ. ಅಲ್ಲದೆ, ಭಾರತೀಯ ಆಯುಷ್ ಉತ್ಪನ್ನಗಳಿಗೆ ವಿಶ್ವದಾದ್ಯಂತ ಮಾರುಕಟ್ಟೆಗಳನ್ನು ತೆರೆಯುತ್ತದೆ. ಇದರಿಂದ ಚಿಕಿತ್ಸೆಗಾಗಿ ಭಾರತಕ್ಕೆ ಬರುವ ವಿದೇಶಿಗರಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ತಿಳಿಸಿದರು.
ಸರ್ಕಾರವು ದೇಶದಲ್ಲಿ ಆಯುಷ್ ಪಾರ್ಕ್ ಜಾಲವನ್ನು ಅಭಿವೃದ್ಧಿಪಡಿಸುತ್ತಿದೆ. ಕೇರಳದಲ್ಲಿ ವೈದ್ಯಕೀಯ ಪ್ರವಾಸೋದ್ಯಮದ ಯಶಸ್ಸನ್ನು ಉಲ್ಲೇಖಿಸಿದ ಮೋದಿ, ದೇಶದ ಪ್ರತಿಯೊಂದು ರಾಜ್ಯವು ಅಂತಹ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಸಂಶೋಧಿಸಿ ಜಾಗತಿಕ ಮಟ್ಟಕ್ಕೆ ಒಯ್ಯಬೇಕಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೋಸ್ ಅಧಾನೊಮ್ ಗೆಬ್ರೆಯಸಸ್, ಮಾರಿಷಸ್ ಪ್ರಧಾನಿ ಪ್ರವಿಂದ್ ಜಗನ್ನಾಥ್ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು.