ಜೈಪುರ: ಕಾಂಗ್ರೆಸ್ ಅಂಗಳದಲ್ಲಿ ಒಬ್ಬರಾದ ಮೇಲೆ ಮತ್ತೊಬ್ಬರು ರೆಬೆಲ್ ಆಗ್ತಿರೋ ಬೆಳವಣಿಗೆಗಳಾಗ್ತಿವೆ. ಮುಂಬರುವ ರಾಜಸ್ತಾನ ಚುನಾವಣೆಗೂ ಮುನ್ನ ತಡಮಾಡದೆಯೆ ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಸಚಿನ್ ಪೈಲಟ್ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಳಿ ಹೇಳಿದ್ದಾರೆಂದು ವರದಿಯಾಗಿದೆ.
2023ರ ರಾಜಸ್ತಾನ ವಿಧಾನಸಭೆ ಚುನಾವಣೆಗೂ ಮುನ್ನ ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸದಿದ್ದರೆ, ಪಂಜಾಬ್‌ನಂತೆಯೇ ರಾಜಸ್ಥಾನವನ್ನು ಅಧಿಕಾರದಿಂದ ಕಳೆದುಕೊಳ್ಳಬೇಕಾಗುತ್ತದೆ ಎಂದು ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾಗೆ ಸಚಿನ್ ಪೈಲಟ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಸಚಿನ್ ಪೈಲಟ್ ಕಳೆದ ವಾರ ಗಾಂಧಿ ಕುಟುಂಬದವರೊಂದಿಗೆ ಮೂರು ಸಭೆಗಳನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಅಧಿಕಾರ ಬದಲಾವಣೆಯಲ್ಲಿ ವಿಳಂಬ ಅನುಸರಿಸಿದರೆ ಪಂಜಾಬ್ ಫಲಿತಾಂಶ ಪುನರಾವರ್ತನೆಗೆ ಕಾರಣವಾಗುತ್ತದೆ ಎಂದು ಹೈಕಮಾಂಡ್ ನ ಎಚ್ಚರಿಸಿದ್ದಾರೆ.
ಇತ್ತೀಚಿಗೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಸಚಿನ್ ಪೈಲಟ್, ನನ್ನ ರಾಜೀನಾಮೆ ಯಾವಾಗಲೂ ಸೋನಿಯಾ ಗಾಂಧಿಯವರ ಬಳಿ ಇರುತ್ತದೆ ಎಂದಿದ್ದರು.
ಡಿಸೆಂಬರ್ 2023 ರಲ್ಲಿ ರಾಜಸ್ಥಾನದಲ್ಲಿ ಚುನಾವಣೆಗಳು ನಡೆಯಲಿವೆ. ಈ ಕಾರಣದಿಂದ ಚುನಾವಣೆಗೆ ವರ್ಷಕ್ಕೂ ಮೊದಲು ತಮ್ಮನ್ನು ಮಖ್ಯಮಂತ್ರಿಯನ್ನಾಗಿ ಮಾಡಿ, ಕಳೆದ ಬಾರಿಯಂತೆ ಗೆಲುವು ದಾಖಲಿಸಲು ಅವಕಾಶ ನೀಡಿ ಎಂದು ಸಚಿನ್ ಪೈಲಟ್ ಗಾಂಧಿ ಕುಟುಂಬದ ಮನೆ ಬಾಗಿಲು ತಟ್ಟುತ್ತಿದ್ದಾರೆ.
ಸದ್ಯಕ್ಕೆ, ರಾಜಸ್ಥಾನದ ಉದಯಪುರದಲ್ಲಿ ಮೇ 13 ರಿಂದ 15 ರವರೆಗಿನ “ಚಿಂತನ್ ಶಿವರ್” ಅಥವಾ ಆತ್ಮಾವಲೋಕನ ಸಭೆಯ ತನಕ ಕಾಂಗ್ರೆಸ್ ತನ್ನ ನಿರ್ಧಾರವನ್ನ ಮುಂದೂಡಿದೆ.
2018 ರಲ್ಲಿ ರಾಜಸ್ತಾನದಲ್ಲಿ ಕಾಂಗ್ರೆಸ್ ಗೆದ್ದಾಗ ಸಚಿನ್ ಪೈಲಟ್ ಸಿಎಂ ಹುದ್ದೆಗೇರುವ ಆಸೆಯಲ್ಲಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಬಳಿಕ 2020 ರಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯವೆದ್ದಾಗ ಕಾಂಗ್ರೆಸ್, ಸಚಿನ್ ಪೈಲಟ್ ಅವರನ್ನ ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಮತ್ತು ಉಪಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿತ್ತು. ನಂತರ ಸಚಿನ್ ಪೈಲಟ್ ಬಿಜೆಪಿ ಸೇರುತ್ತಾರೆಂಬ ವದಂತಿ ಮಧ್ಯೆ ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ಸಚಿನ್ ಪೈಲಟ್ ಸ್ಪಷ್ಟಪಡಿಸಿದ್ದರು.