ಕೊಲಂಬೊ: ನೆರೆಯ ದ್ವೀಪ ರಾಷ್ಟ್ರ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವಂತೆಯೇ, ತಮ್ಮ ಸಹೋದರ ರಾಜಪಕ್ಸ ಅವರನ್ನು ಪ್ರಧಾನಿ ಹುದ್ದೆಯಿಂದ ತೆಗೆದುಹಾಕಲು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಒಪ್ಪಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ದೇಶದಲ್ಲಿನ ಪ್ರಸ್ತುತ ಹದಗೆಟ್ಟ ಆರ್ಥಿಕ ಪರಿಸ್ಥಿತಿ ವಿಚಾರವಾಗಿ ನೂರಾರು ಟ್ರೇಡ್ ಯೂನಿಯನ್ ಗಳು ಶ್ರೀಲಂಕಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಶ್ರೀಲಂಕಾ ಅಧ್ಯಕ್ಷ ಗೋಟಬಯ ಕೂಡಲೇ ರಾಜೀನಾಮೆ ನೀಡುವಂತೆ ಒತ್ತಾಯಗಳು ಕೇಳಿಬರುತ್ತಿವೆ.
ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ಗೋಟಬಯ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸ ಸೇರಿದಂತೆ ರಾಜಪಕ್ಸ ಕುಟುಂಬದ ಮುಖಂಡರ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಇದರಿಂದಾಗಿ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಜೊತೆಗೆ ಔಷಧ, ಆಹಾರ ಪದಾರ್ಥಗಳ ಕೊರತೆಯೂ ಉಂಟಾಗಿದೆ.
ಈ ಮಧ್ಯೆ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲು ರಾಷ್ಟ್ರೀಯ ಮಂಡಳಿಯನ್ನು ನೇಮಿಸಲಾಗುವುದು, ಎಲ್ಲಾ ಪಕ್ಷಗಳನ್ನು ಒಳಗೊಂಡಿರುವ ಕ್ಯಾಬಿನೆಟ್ ನ್ನು ಸಂಸತ್ತಿನಲ್ಲಿ ರಚಿಸಲಾಗುವುದು, ಈ ಪ್ರಕ್ರಿಯೆಗೆ ಅಧ್ಯಕ್ಷ ಗೋಟಬಯ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಸದ ಮೈತ್ರಿಪಾಲ ಸಿರಿಸೇನಾ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.