ಕುಂಬಳೆ: ಯೇಸುಕ್ರಿಸ್ತರ ಪುನರುತ್ಥಾನ ಹಬ್ಬವಾದ ಈಸ್ಟರ್ ಹಬ್ಬವನ್ನು ಕ್ರೈಸ್ತ ಬಾಂಧವರು ಸಂಭ್ರಮದಿಂದ ಆಚರಿಸಿದರು. ಜಿಲ್ಲೆಯ ಕ್ರೈಸ್ತ ದೇವಾಲಯಗಳಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಗ್ಗೆ ಬಲಿಪೂಜೆ ನೆರವೇರಿತು . ಕಯ್ಯಾರು ಕ್ರಿಸ್ತ ರಾಜಳಿಗರ್ಜಿಯಲ್ಲಿ ನಡೆದ ಬಲಿಪೂಜೆಯಲ್ಲಿ ಪ್ರಧಾನ ಧರ್ಮಗುರುಗಳಾಗಿ ತಲಪಾಡಿ ಫ್ರೆಂಡ್ ಶಿಫ್ ಹೌಸ್ ನ ನಿರ್ದೇಶಕ ಫಾದರ್ ಅರುಣ್ ಲೋಬೊ ವಿಧಿ ವಿಧಾನ ನೆರವೇರಿಸಿದರು. ಕಯ್ಯಾರು ಕ್ರಿಸ್ತರಾಜ ಇಗರ್ಜಿ ಧರ್ಮಗುರು ಹ್ಯಾರಿ. ಡಿ ಸೋಜ ಉಪಸ್ಥಿತರಿದ್ದರು
ಹೊಸ ಅಗ್ನಿಯ ಆಶೀರ್ವಚನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಹೊಸ ಅಗ್ನಿಯಿಂದ ಈಸ್ಟರ್ ಮೊಂಬತ್ತಿಯನ್ನು ಧರ್ಮ ಗುರುಗಳು ಬೆಳಗಿಸಿದ ಬಳಿಕ ಭಾಗವಹಿಸಿದ್ದ ಸಮಸ್ತ ಕ್ರೈಸ್ತರು ಹೊಸ ಅಗ್ನಿಯ ಮೂಲಕ ಮೇಣದ ಬತ್ತಿ ಉರಿಸಿ ಪ್ರಾರ್ಥನೆ ಸಲ್ಲಿಸಿದರು. ಬೈಬಲಿನ ಹಳೆಯ ಮತ್ತು ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನದ ಬಳಿಕ ಧರ್ಮಗುರುಗಳು ಪ್ರವಚನ ಮತ್ತು ಸಂದೇಶ ನೀಡಿದರು. ಪವಿತ್ರ ಜಲದ ಆಶೀರ್ವಚನ ಹಾಗೂ ಕ್ರೈಸ್ತ ವಿಶ್ವಾಸ, ಸತ್ಯದ ಮರು ದೃಢೀಕರಣ ಈ ಸಂದರ್ಭ ನಡೆಯಿತು.
ಸಂಭ್ರಮದ ಬಲಿ ಪೂಜೆ ಬಳಿಕ ಭಾಗವಹಿಸಿದ ಕ್ರೈಸ್ತ ಬಾಂಧವರು ಈಸ್ಟರ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.