ಲಖನೌ: ಮಾಹಿತಿ ಹಕ್ಕು ಕಾಯಿದೆ ಅಡಿ ಸೂಕ್ತ ಅವಧಿಯಲ್ಲಿ ಉತ್ತರಿಸದ ತಪ್ಪಿಗೆ ಗ್ರಾಮಾಭಿವೃದ್ಧಿ ಅಧಿಕಾರಿಯೊಬ್ಬರಿಗೆ 250 ಮಕ್ಕಳಿಗೆ ಬಿಸಿಯೂಟ ಬಡಿಸುವ ಶಿಕ್ಷೆ ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ವಿದ್ಯಾರ್ಥಿಗಳಿಗೆ ಊಟ ಬಡಿಸುತ್ತಿರುವ ವಿಡಿಯೊವನ್ನು ದಾಖಲಿಸುವಂತೆ ತಾಕೀತು ಮಾಡಲಾಗಿದೆ.

ಉತ್ತರ ಪ್ರದೇಶದ ಘಾಜಿಪುರ್ ಜಿಲ್ಲೆಯ ನುನರ ಗ್ರಾಮದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ಕೋರಿ ಭೂಪೇಂದ್ರ ಕುಮಾರ್ ಪಾಂಡೆ ಎಂಬುವವರು 6 ವರ್ಷಗಳ ಹಿಂದೆ ಆರ್‌ಟಿಐ ಅರ್ಜಿ ಹಾಕಿದ್ದರು. ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಗ್ರಾಮಾಭಿವೃದ್ಧಿ ಅಧಿಕಾರಿಯಾಗಿರುವ ಚಂದ್ರಿಕಾ ಪ್ರಸಾದ್ ಅವರು ಸೂಕ್ತ ಸಮಯದಲ್ಲಿ ಉತ್ತರಿಸಲು ವಿಫಲರಾಗಿದ್ದರು.
ಈ ಕುರಿತು ಆರ್‌ಟಿಐ ಅರ್ಜಿದಾರ ಪಾಂಡೆ ಅವರ ದೂರಿನಡಿ ಉತ್ತರ ಪ್ರದೇಶದ ಮಾಹಿತಿ ಆಯುಕ್ತ ಅಜಯ್ ಕುಮಾರ್ ಉಪ್ರೇತಿ ಅವರು ಗ್ರಾಮಾಭಿವೃದ್ಧಿ ಅಧಿಕಾರಿಗೆ ಬಿಸಿಯೂಟ ಬಡಿಸುವಂತೆ ಆದೇಶಿಸಿದ್ದಾರೆ.
'ಜಿಲ್ಲೆಯ ಪ್ರಾಥಮಿಕ ಶಾಲೆಯ 250 ಮಕ್ಕಳಿಗೆ ಬಿಸಿಯೂಟ ಬಡಿಸಬೇಕು. ದಂಡದ ರೂಪವಾಗಿ ಬಿಸಿಯೂಟಕ್ಕೆ ₹ 25,000 ವೆಚ್ಚ ಭರಿಸಬೇಕು' ಎಂದು ಚಂದ್ರಿಕಾ ಪ್ರಸಾದ್ ಅವರಿಗೆ ಉಪ್ರೇತಿ ಸೂಚಿಸಿದ್ದಾರೆ.
'ಸೂಕ್ತ ಸಮಯದಲ್ಲಿ ಆರ್‌ಟಿಐಗೆ ಉತ್ತರಿಸದಿದ್ದರೆ ಸಾಮಾನ್ಯವಾಗಿ ಗ್ರಾಮಾಧಿಕಾರಿಗೆ ₹ 25,000 ದಂಡವನ್ನು ವಿಧಿಸಲಾಗುತ್ತದೆ. ಆದರೆ ಸಾಂಕೇತಿಕ ಶಿಕ್ಷೆಯಾಗಿ ಬಿಸಿಯೂಟ ಬಡಿಸಲು ಸೂಚಿಸಲಾಗಿದೆ' ಎಂದು ಉಪ್ರೇತಿ ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಗ್ರಾಮಾಧಿಕಾರಿಯಾಗಿದ್ದ ಗೋಪಾಲ್ ಸಿಂಗ್ ಎಂಬುವವರಿಗೂ ₹25,000 ದಂಡ ವಿಧಿಸಲಾಗಿದೆ ಎಂದು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.