ನವದೆಹಲಿ: ಅಣುಶಕ್ತಿ ಇಲಾಖೆ (ಡಿಎಇ) ನೀಡುವ ಪ್ರತಿಷ್ಠಿತ ರಾಜಾ ರಾಮಣ್ಣ ಫೆಲೋಶಿಪ್‌ಗೆ ಭಾಭಾ ಅಣು ಸಂಶೋಧನಾ ಕೇಂದ್ರದ (ಬಿಎಆರ್‌ಸಿ) ಹಿರಿಯ ವಿಜ್ಞಾನಿ ರಮೇಶ ಚಂದ್ ರನ್ನೋತ್ ಅವರು ಆಯ್ಕೆಯಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ನವದೆಹಲಿ: ಅಣುಶಕ್ತಿ ಇಲಾಖೆ (ಡಿಎಇ) ನೀಡುವ ಪ್ರತಿಷ್ಠಿತ ರಾಜಾ ರಾಮಣ್ಣ ಫೆಲೋಶಿಪ್‌ಗೆ ಭಾಭಾ ಅಣು ಸಂಶೋಧನಾ ಕೇಂದ್ರದ (ಬಿಎಆರ್‌ಸಿ) ಹಿರಿಯ ವಿಜ್ಞಾನಿ ರಮೇಶ ಚಂದ್ ರನ್ನೋತ್ ಅವರು ಆಯ್ಕೆಯಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಈ ಫೆಲೋಶಿಪ್‌ಗೆ ರಮೇಶಚಂದ್ ಅವರ ಆಯ್ಕೆ 'ಹಿತಾಸಕ್ತಿ ಸಂಘರ್ಷ' ಹಾಗೂ 'ಸ್ವಜನ ಪಕ್ಷಪಾತ'ಕ್ಕೆ ನಿದರ್ಶನವಾಗಿದೆ ಎಂದು ಡಿಎಇಯ ಕೆಲವು ವಿಜ್ಞಾನಿಗಳು ಆರೋಪಿಸಿದ್ದಾರೆ.
ಅಣುಶಕ್ತಿ ಇಲಾಖೆ ಕಾರ್ಯದರ್ಶಿ ಹಾಗೂ ಅಣುಶಕ್ತಿ ಆಯೋಗದ ಚೇರಮನ್ ಕೆ.ಎನ್.ವ್ಯಾಸ್ ಹಾಗೂ ವಿಜ್ಞಾನಿ ರಮೇಶಚಂದ್ ರನ್ನೋತ್ ಬೀಗರು. ವ್ಯಾಸ್ ಅವರ ಪುತ್ರ ವಿನಯ್ ಅವರು ರನ್ನೋತ್ ಪುತ್ರಿ ಪಾರುಲ್ ಅವರನ್ನು 2016ರಲ್ಲಿ ವಿವಾಹವಾಗಿದ್ದಾರೆ ಎಂದು ಇಲಾಖೆಯ ಸಿಬ್ಬಂದಿ ಹೇಳಿದ್ದಾರೆ.
ಈ ಆರೋಪಗಳ ಬಗ್ಗೆ ಪ್ರತಿಕ್ರಿಯೆ ಪಡೆಯುವ ಸಲುವಾಗಿ ವ್ಯಾಸ್ ಹಾಗೂ ರನ್ನೋತ್ ಅವರಿಗೆ 'ಪ್ರಜಾವಾಣಿ' ಇ-ಮೇಲ್ ಹಾಗೂ ಎಸ್‌ಎಂಎಸ್ ಕಳುಹಿಸಿತ್ತು. ಆದರೆ, ಇಬ್ಬರೂ ಪ್ರತಿಕ್ರಿಯೆ ನೀಡಿಲ್ಲ.
2017ರಿಂದ 2021ರ ನಡುವೆ ರಾಜಾ ರಾಮಣ್ಣ ಫೆಲೋಶಿಪ್‌ಗೆ ಆಯ್ಕೆಯಾದವರ ಹೆಸರುಗಳನ್ನು ಒದಗಿಸುವಂತೆ 'ಪ್ರಜಾವಾಣಿ' ಆರ್‌ಟಿಐನಡಿ ಅರ್ಜಿ ಸಲ್ಲಿಸಿತ್ತು. ಏಳು ತಿಂಗಳು ನಂತರ ಇಲಾಖೆಯು ಪಟ್ಟಿಯನ್ನು ಒದಗಿಸಿದೆ. 2021ರಲ್ಲಿ ಈ ಫೆಲೋಶಿಪ್‌ಗೆ ಬಿಎಆರ್‌ಸಿಯ ಎಂಟು ಜನ ವಿಜ್ಞಾನಿಗಳು ಭಾಜನರಾಗಿದ್ದಾರೆ.
'ಉನ್ನತ ಸಂಶೋಧನೆಯಲ್ಲಿ ತೊಡಗಿರುವ ನಿವೃತ್ತ ವಿಜ್ಞಾನಿಗಳು/ಎಂಜಿನಿಯರ್‌ಗಳು ಹಾಗೂ ತಂತ್ರಜ್ಞರ ಸೇವೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ 2000ರಲ್ಲಿ ರಾಜಾ ರಾಮಣ್ಣ ಫೆಲೋಶಿಪ್ ನೀಡುವುದನ್ನು ಆರಂಭಿಸಲಾಯಿತು. ಆದರೆ, ಈ ಫೆಲೋಶಿಪ್‌ಗೆ ಆಯ್ಕೆಯಾದವರ ಹೆಸರುಗಳನ್ನು ಇಲಾಖೆಯು ಸಾರ್ವಜನಿಕವಾಗಿ ಯಾವತ್ತೂ ಪ್ರಕಟಿಸಿಲ್ಲ' ಎಂದು ಇಲಾಖೆಯ ಮೂಲಗಳು ಹೇಳಿವೆ.
ಈ ಫೆಲೋಶಿಪ್‌ಗೆ ಆಯ್ಕೆಯಾಗುವವರಿಗೆ ಪಿಂಚಣಿ ಜೊತೆಗೆ ತಿಂಗಳಿಗೆ ₹ 1 ಲಕ್ಷ ಗೌರವ ಧನ ಹಾಗೂ ಇತರ ಸೌಲಭ್ಯಗಳನ್ನು ನೀಡಲಾಗುತ್ತದೆ.