ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಪರಿಸರ ಸ್ನೇಹಿ ವಿಧಾನದತ್ತ ಹೊರಳಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್ಜಿಟಿ)ವು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಶನಿವಾರ ನಿರ್ದೇಶನ ನೀಡಿದೆ ಹಾಗೂ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಪಿಎನ್ಜಿ ಚಿತಾಗಾರಗಳನ್ನು ನಿರ್ಮಿಸುವ ಕಾರ್ಯಸಾಧ್ಯತೆಯನ್ನು ಅನ್ವೇಷಿಸಬೇಕೆಂದು ಅದು ಸಲಹೆ ನೀಡಿದೆ.
ಕಟ್ಟಿಗೆಯ ಚಿತೆಯ ಮೂಲಕ ನೆರವೇರಿಸಲಾಗುವ ಪಾರ್ಥಿವ ಶರೀರದ ಅಂತ್ಯಸಂಸ್ಕಾರಕ್ಕೆ 350ರಿಂದ 450 ಕೆ.ಜಿ. ಕಟ್ಟಿಗೆಯ ಅಗತ್ಯವಿರುತ್ತದೆ ಎಂದು ಅದು ತಿಳಿಸಿದೆ. ಆದರೆ ತನಗೆ ಯಾವುದೇ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ಉದ್ದೇಶವಿಲ್ಲವೆಂದು ನ್ಯಾಯಾಧೀಕರಣವು, ಸ್ಪಷ್ಟಪಡಿಸಿದೆ. ಇಂತಹ ವಾಯುಮಾಲಿನ್ಯವನ್ನು ತಡೆಗಟ್ಟಲು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳು ಪರಿಹಾರಾತ್ಮಕ ನಡೆಗಳನ್ನು ಇರಿಸುವ ಬಗ್ಗೆ ಪರಿಶೀಲಿಸಬೇಕು ಹಾಗೂ ಶವಸಂಸ್ಕಾರಕ್ಕೆ ಪರಿಸರ ಸ್ನೇಹಿ ವಿಧಾನಗಳತ್ತ ಹೊರಳುವಂತೆ ಜನರಿಗೆ ಅರಿವು ಮೂಡಿಸಬೇಕು ಹಾಗೂ ಅವರನ್ನು ಪ್ರೇರೇಪಿಸಬೇಕು ಎಂದು ಅದು ಹೇಲಿದೆ.
ಕಟ್ಟಿಗೆ ಆಧಾರಿತ ಚಿತಾಗಾರಕ್ಕೆ ಪರ್ಯಾಯ ಆಯ್ಕೆಯಾಗಿ ವಿದ್ಯುತ್/ಪಿಎನ್ಜಿ ಚಿತಾಗಾರಗಳನ್ನು ನಿರ್ಮಿಸಲು ರಾಜ್ಯ ಹಾಗೂ ಕೇಂದ್ರಾಡಳಿತಗಳು ಮುಂದಾಗಬೇಕು ಎಂದು ನ್ಯಾಯಾಧೀಕರಣ ತಿಳಿಸಿದೆ.
ಗಾಝಿಯಾಬಾದ್ನ ಇಂದಿರಾಪುರಂನ ಶಕ್ತಿ ಖಾಂಡ-4ನಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿತಾಗಾರದಲ್ಲಿ ಮೃತದೇಹಗಳ ಅಂತ್ಯಸಂಸ್ಕಾರದ ಸಂದರ್ಭ ಹೊರಹೊಮ್ಮುವ ಧೂಳು ಹಾಗೂ ಹೊಗೆಯಿಂದ ವಾಯುಮಾಲಿನ್ಯವುಂಟಾಗುತ್ತಿದ್ದು ಅದನ್ನು ತಡೆಗಟ್ಟಬೇಕೆಂದು ಕೋರಿ ರಿಯಲ್ ಆಯಂಕರ್ಸ್ ಡೆವಲಪರ್ಸ್ ಪ್ರೈ. ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ಆಲಿಕೆಯನ್ನು ನ್ಯಾಯಾಧೀಕರಣವು ಕೈಗೆತ್ತಿಕೊಂಡ ಸಂದರ್ಭದಲ್ಲಿ ಅದು ಈ ಅಭಿಪ್ರಾಯ ವ್ಯಕ್ತಪಡಿಸಿದೆ.