ಪಾಟ್ನಾ: ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ರಾಮ ನವಮಿಯ ಮೆರವಣಿಗೆ ವೇಳೆಯ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋ ಮತ್ತು ಫೊಟೋದಲ್ಲಿ, ಕತಿಹಾರ್‌ನ ಎಂಜಿ ರಸ್ತೆಯಲ್ಲಿರುವ ಜಾಮಾ ಮಸೀದಿ ಎದುರು ಕೇಸರೀ ಧಾರಿ ಯುವಕರು ಮಾನವ ಸರಪಳಿ ರಚಿಸಿರುವುದನ್ನು ಕಾಣಬಹುದು.
ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ರಾಮನವಮಿ ಮೆರವಣಿಗೆ ವೇಳೆಯಲ್ಲಿ ಮಸೀದಿಗಳಿಗೆ ಹಾನಿಯುಂಟು ಮಾಡಿದ ಹಾಗೂ ಗಲಭೆ ನಡೆದಿರುವ ಹಿನ್ನೆಲೆಯಲ್ಲಿ ಹಿಂದೂ ಯುವಕರು ಮಸೀದಿಗೆ ರಕ್ಷಣೆ ಕೊಡುತ್ತಿದ್ದಾರೆ ಎಂಬ ಅಡಿ ಬರೆಹದೊಂದಿಗೆ ಇದು ವ್ಯಾಪಕ ವೈರಲ್ ಆಗಿತ್ತು.
ಬರಹಗಾರ ಅಸ್ಗರ್ ವಜಾಹತ್‌ನಿಂದ ಹಿಡಿದು ನಟಿ ಸ್ವರಾ ಭಾಸ್ಕರ್ ವರೆಗೆ, ಈ ಚಿತ್ರವನ್ನು ಹಂಚಿಕೊಂಡಿದ್ದು, ಇದನ್ನು ʼಭರವಸೆಯ ಚಿತ್ರʼ ಎಂದು ಬಣ್ಣಿಸುತ್ತಾ, ʼನಮಗೆ ಅಂತಹ ಮಾನವೀಯತೆ ಬೇಕುʼ ಎಂದು ಬರೆದು ಕೊಂಡಿದ್ದರು.
ಆದರೆ, ವೈರಲ್ ಆಗಿರುವ ಈ ಚಿತ್ರಕ್ಕೆ ಸಂಬಂಧಿಸಿದಂತೆ, BBC ವಾಸ್ತವಾಂಶ ಏನೆಂದು ತಿಳಿಯಲು ಪ್ರಯತ್ನಿಸಿದೆ. ಈ ಚಿತ್ರದ ನಿಜಾಂಶ ಏನು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಷಯಗಳಲ್ಲಿ ಎಷ್ಟು ಸತ್ಯವಿದೆ? ಎನ್ನುವುದನ್ನು ಬಿಬಿಸಿ ಹಿಂದಿ ಫ್ಯಾಕ್ಟ್ ಚೆಕ್ ಮಾಡಿದೆ.
ಸಂಘಟಕರು ಹೇಳುವುದೇನು?
ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 300 ಕಿಮೀ ದೂರದಲ್ಲಿರುವ ಕತಿಹಾರ್‌ನಲ್ಲಿ ಏಪ್ರಿಲ್ 10 ರಂದು ರಾಮನವಮಿಯಂದು ಈ ಮೆರವಣಿಗೆ ನಡೆದಿದೆ. ಈ ಮೆರವಣಿಗೆಯನ್ನು ಭಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದುತ್ವ ಸಂಘಟನೆಗಳು ಆಯೋಜಿಸಿದ್ದವು.
ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಚಿವ ರಿತೇಶ್ ದುಬೆ ಬಿಬಿಸಿ ಹಿಂದಿಗೆ ತಿಳಿಸಿದ ಪ್ರಕಾರ ಅವರು ಮಸೀದಿಯನ್ನು ರಕ್ಷಿಸಲು ಮಾನವ ಸರಪಳಿ ರಚಿಸಿಲ್ಲ.
"ನಾವು ಮಸೀದಿಯನ್ನು ಉಳಿಸಲು ಮಾನವ ಸರಪಳಿಯನ್ನು ರಚಿಸಲಿಲ್ಲ, ನಮ್ಮ ಮೆರವಣಿಗೆಯಲ್ಲಿ ತೊಡಗಿರುವ ಜನರಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ನಾವು ಮಾನವ ಸರಪಳಿಯನ್ನು ರಚಿಸಿದ್ದೇವೆ" ಎಂದು ರಿತೇಶ್ ದುಬೆ ತಿಳಿಸಿದ್ದಾರೆ.
ಏಳು ಕಿಲೋಮೀಟರ್ ಉದ್ದದ ಮೆರವಣಿಗೆ ಮಧ್ಯಾಹ್ನ 1.30 ರ ಸುಮಾರಿಗೆ ಪ್ರಾರಂಭವಾಗಿ ಸಂಜೆ 7 ಗಂಟೆಗೆ ಕೊನೆಗೊಂಡಿತು. BBC ಯಲ್ಲಿ ಲಭ್ಯವಿರುವ ಫೋಟೋಗಳು ಮತ್ತು ವೀಡಿಯೊಗಳು, ಮೆರವಣಿಗೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿರುವುದನ್ನು ತೋರಿಸುತ್ತವೆ.
ಈ ಮೆರವಣಿಗೆಯು ಕೂಡಾ ಇತರೆಡೆಯ ರಾಮನವಮಿಯ ಕಾರ್ಯಕ್ರಮಗಳಂತೆ ದೊಣ್ಣೆ ಮತ್ತು ಕತ್ತಿಗಳೊಂದಿಗೆ ಹೊರಟಿದೆ. ಕತಿಹಾರ್‌ನಲ್ಲಿ ರಾಮನವಮಿ ಮೆರವಣಿಗೆ ಹೊರಡುವ ಮಾರ್ಗದಲ್ಲಿ ಎರಡು ಮಸೀದಿಗಳು ಸಿಗುತ್ತವೆ. ಮೊದಲನೆಯದು ಎಂಜಿ ರಸ್ತೆಯಲ್ಲಿರುವ ಜಾಮಾ ಮಸೀದಿ ಮತ್ತು ಎರಡನೆಯದು ಬಾಟಾ ಚೌಕ್‌ನಲ್ಲಿದೆ. ವೈರಲ್ ಆಗಿರುವ ಫೋಟೋ ಮತ್ತು ವಿಡಿಯೋಗಳು ಎಂಜಿ ರಸ್ತೆಯಲ್ಲಿರುವ ಜಾಮಾ ಮಸೀದಿಯ ಮುಂಭಾಗದ್ದು ಎಂದು ಬಿಬಿಸಿ ವರದಿ ಮಾಡಿದೆ.
ಈ ನಿಟ್ಟಿನಲ್ಲಿ ಮತ್ತೊಬ್ಬ ಆಯೋಜಕ, ಬಜರಂಗದಳದ ವಿಭಾಗ ಸಂಯೋಜಕ ಪವನ್ ಪೊದ್ದಾರ್ ಜೊತೆಗೂ ಬಿಬಿಸಿ ಮಾತನಾಡಿದೆ.
'ರಾಮನವಮಿಯಂದು ಕಲ್ಲು ತೂರಾಟ ಸಾಮಾನ್ಯವಾಗಿದೆ. ಯಾವುದೇ ಸಮಾಜಘಾತುಕ ಶಕ್ತಿಗಳು ನಮ್ಮ ಮೆರವಣಿಗೆಯನ್ನು ಹಾಳು ಮಾಡಬಾರದು ಎಂಬ ಉದ್ದೇಶದಿಂದ ನಾವು ಈ ಮಾನವ ಸರಪಳಿಯನ್ನು ರಚಿಸಿದ್ದೇವೆ' ಎಂದು ಅವರು ಬಿಬಿಸಿಗೆ ತಿಳಿಸಿದ್ದಾರೆ.
ಹೀಗಾಗಿ ಮಸೀದಿಯ ಭದ್ರತೆಯಂತಹ ಉದ್ದೇಶವೇನೂ ಇದರಲ್ಲಿ ಇರಲಿಲ್ಲ ಎಂದು ಹೇಳಿದ ಪವನ್ ಪೊದ್ದಾರ್, "ಮೆರವಣಿಗೆಯಿಂದ ಮಸೀದಿಗೆ ಯಾವ ಅಪಾಯ ಉಂಟಾಗಬಹುದು? ಯಾವುದೇ ಹಿಂದೂ ಮೊದಲು ಹೊಡೆಯುವುದಿಲ್ಲ. ಶೋಭಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಯಾವುದೇ ತೊಂದರೆಯಾಗದಂತೆ ನಿಂತಿದ್ದೆವು' ಎಂದಿದ್ದಾರೆ.