ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏ.07 ರಂದು ಶಸ್ತ್ರಾಸ್ತ್ರಗಳ ಆಮದು ನಿರ್ಬಂಧದ 3ನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಸೇನಾ ವ್ಯವಸ್ಥೆಗಳು ಹಾಗೂ ಶಸ್ತ್ರಾಸ್ತ್ರಗಳಿಗೆ ಸಂಬಂಧಪಟ್ಟ 101 ಸಾಮಗ್ರಿಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಈ ಉಪಕರಣಗಳ ಆಮದನ್ನು ನಿಲ್ಲಿಸಿ ಸ್ಥಳೀಯವಾಗಿ ಅಭಿವೃದ್ಧಿಪಡಿಸುವುದು ಈ ನಡೆಯ ಉದ್ದೇಶವಾಗಿದೆ.
ಕಾರ್ಯಕ್ರಮವೊಂದರಲ್ಲಿ ಪಟ್ಟಿ ಬಿಡುಗಡೆ ಮಾಡಿರುವ ರಾಜನಾಥ್ ಸಿಂಗ್, ಈ ಪಟ್ಟಿಯಲ್ಲಿ ಸೆನ್ಸರ್, ಆಯುಧಗಳು, ಶಸ್ತ್ರಾಸ್ತ್ರಗಳು ಸೇರಿದಂತೆ ಪ್ರಮುಖ ಉಪಕರಣಗಳ ಆಮದನ್ನು ನಿರ್ಬಂಧಿಸಲಾಗಿದೆ. ನೌಕಾ ಯುಟಿಲಿಟಿ ಹೆಲಿಕಾಪ್ಟರ್‌ಗಳು, ಗಸ್ತು ನೌಕೆಗಳು, ಹಡಗು ನಿಗ್ರಹ ಕ್ಷಿಪಣಿ ಮತ್ತು ವಿಕಿರಣ ನಿಗ್ರಹ ಕ್ಷಿಪಣಿಗಳೂ ಈ ಪಟ್ಟಿಯಲ್ಲಿವೆ ಎಂದು ಹೇಳಿದ್ದಾರೆ.
"ಈ ಪಟ್ಟಿ ಬಿಡುಗಡೆಯಾಗುತ್ತಿರುವುದು ರಕ್ಷಣಾ ಕ್ಷೇತ್ರದಲ್ಲಿ ಈ ವರೆಗೂ ನಾವು ಸಾಧಿಸಿರುವ ಸ್ವಾವಲಂಬನೆಯನ್ನು ತೋರುತ್ತದೆ ಎಂದು ಸಚಿವರು ಹೇಳಿದ್ದಾರೆ.
ಮೊದಲ ಪಟ್ಟಿಯಲ್ಲಿ ಫಿರಂಗಿ ಬಂದೂಕುಗಳು, ಅಲ್ಪ-ಶ್ರೇಣಿಯ ಮೇಲ್ಮೈಯಿಂದ ಚಿಮ್ಮುವ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಕಡಲಾಚೆಯ ಗಸ್ತು ಹಡಗುಗಳನ್ನು ಆಗಸ್ಟ್ 2020 ರಲ್ಲಿ ಸೇರಿಸಲಾಗಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ ಸರ್ಕಾರ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ 108 ಉಪಕರಣಗಳನ್ನು ಆಮದು ನಿರ್ಬಂಧದ ಪಟ್ಟಿಗೆ ಸೇರಿಸಲಾಗಿತ್ತು.
ನಮ್ಮ ಎರಡು ಪ್ರಮುಖ ಉದ್ದೇಶಗಳೆಂದರೆ ರಕ್ಷಣಾ ವಲಯದಲ್ಲಿನ ಸ್ವಾವಲಂಬನೆ ಹಾಗೂ ರಕ್ಷಣಾ ಸಾಧನಗಳ ರಫ್ತು ಆಗಿದೆ. ಕಳೆದ 5 ವರ್ಷಗಳಲ್ಲಿ ದೇಶೀಯವಾಗಿ ರಕ್ಷಣಾ ಉಪಕರಣಗಳ ಉತ್ಪಾದನೆಯನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ 5 ವರ್ಷಗಳಲ್ಲಿ 25 ಬಿಲಿಯನ್ (1.75 ಲಕ್ಷ ಕೋಟಿ) ರಕ್ಷಣಾ ಉತ್ಪಾದನೆಗೆ ರಕ್ಷಣಾ ಸಚಿವಾಲಯ ಗುರಿ ಹೊಂದಿದೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.