ನವದೆಹಲಿ :ಭಾರತೀಯ ಮತ್ತು ವಿದೇಶಿ ಶಿಕ್ಷಣ ಸಂಸ್ಥೆಗಳು ಜಂಟಿ ಪದವಿಗಳು,ದ್ವಿಪದವಿಗಳು ಮತ್ತು ಅವಳಿ ಕಾರ್ಯಕ್ರಮಗಳನ್ನು ಒದಗಿಸಲು ನಿಬಂಧನೆಗಳಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದ ಅಧ್ಯಕ್ಷ ಎಂ.ಜಗದೀಶ ಕುಮಾರ ಅವರು ಹಸಿರು ನಿಶಾನೆಯನ್ನು ತೋರಿಸಿದ್ದಾರೆ. 2021ರಲ್ಲಿ ಕರಡು ನಿಬಂಧನೆಗಳನ್ನು ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು ಮತ್ತು ಸಾರ್ವಜನಿಕರಿಂದ ಮರುಮಾಹಿತಿಗಳನ್ನು ಸಂಗ್ರಹಿಸಿದ ಬಳಿಕ ಇದೀಗ ಅಂತಿಮಗೊಳಿಸಲಾಗಿದೆ.
ಕರಡು ಯುಜಿಸಿ ನಿಯಮಾವಳಿಗಳಂತೆ ಭಾರತದಲ್ಲಿಯ ಉನ್ನತ ಶಿಕ್ಷಣ ಸಂಸ್ಥೆಗಳು ಕ್ರೆಡಿಟ್ ಮಾನ್ಯತೆ ಮತ್ತು ವರ್ಗಾವಣೆ,ಅವಳಿ ವ್ಯವಸ್ಥೆಗಳು ಮತ್ತು ಪದವಿಗಳನ್ನು ನೀಡಲು ವಿದೇಶಿ ಶಿಕ್ಷಣ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಬಹುದು.
ಜಂಟಿ ಪದವಿಗಳಿಗಾಗಿ ಉಭಯ ಪಾಲುದಾರ ಸಂಸ್ಥೆಗಳು ಒಡಂಬಡಿಕೆಯೊಂದಕ್ಕೆ ಸಹಿ ಹಾಕಬೇಕಾಗುತ್ತದೆ. ಭಾರತದ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಕ್ರೆಡಿಟ್‌ನ ಶೇ.30ಕ್ಕೂ ಅಧಿಕ ಭಾಗವ ನ್ನು ವಿದೇಶಿ ಸಂಸ್ಥೆಯಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಕೋರ್ಸ್ ಪೂರ್ಣಗೊಂಡ ಬಳಿಕ ಭಾರತೀಯ ಶಿಕ್ಷಣ ಸಂಸ್ಥೆಯು ಕ್ರೆಡಿಟ್ ಮಾನ್ಯತೆಯ ಪ್ರಮಾಣಪತ್ರದೊಂದಿಗೆ ಪದವಿಯನ್ನು ನೀಡುತ್ತದೆ. ದ್ವಿ ಪದವಿಗಳಿಗೂ ಇದೇ ನಿಯಮ ಅನ್ವಯಿಸುತ್ತದೆಯಾದರೂ ಭಾರತೀಯ ಮತ್ತು ವಿದೇಶ ಶಿಕ್ಷಣ ಸಂಸ್ಥೆಗಳೆರಡೂ ನೀಡುವ ಪದವಿಗಳು ಆಯಾ ಸಂಸ್ಥೆಯಲ್ಲಿ ಗಳಿಸಿದ ಕ್ರೆಡಿಟ್‌ನ್ನು ಸೂಚಿಸುತ್ತವೆ.
ಅವಳಿ ಕಾರ್ಯಕ್ರಮದಡಿ ಪದವಿ ಅಥವಾ ಡಿಪ್ಲೋಮಾವನ್ನು ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳು ಮಾತ್ರ ನೀಡಬೇಕಾಗುತ್ತದೆ. ಈ ವ್ಯವಸ್ಥೆಯು ಹೆಚ್ಚುಕಡಿಮೆ ಕೆಲವು ಖಾಸಗಿ ವಿವಿಗಳು ಹಾಲಿ ಒದಗಿಸುತ್ತಿರುವ ವ್ಯವಸ್ಥೆಯನ್ನು ಹೋಲುತ್ತದೆ. ಈ ವಿವಿಗಳು ತಾವು ಒಪ್ಪಂದ ಮಾಡಿಕೊಂಡಿರುವ ವಿದೇಶಿ ಸಂಸ್ಥೆಗಳಲ್ಲಿ ವ್ಯಾಸಂಗದ ಕೆಲವು ಭಾಗವನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತವೆ.