ಕುಂಬಳೆ: ಕಾವುಗೋಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 2021-22ನೇ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಪಂಚಾಯಿತಿ ಸದಸ್ಯ ಹಾಗೂ ಕ್ಷೇಮಾಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ನಿಸಾರ್ ಕುಲಂಗರ ಅಧ್ಯಕ್ಷತೆ ವಹಿಸಿದ್ದರು. ಮೊಗ್ರಾಲ್ ಪುತ್ತೂರು ಪಂಚಾಯಿತಿ ಅಧ್ಯಕ್ಷೆ ಸಮೀರಾ ಫೈಝಲ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಾಲೆಗೆ ನೂತನ ಕಟ್ಟಡ ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು. ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಪ್ರಮೀಳ ಮಜಲ್ ಅವರು ಶಾಲೆಗೆ ಸ್ಥಳ ದಾನ ಮಾಡಿದ ಶಂಕರ ನಾಯ್ಕರವರ ಭಾವಚಿತ್ರ ಅನಾವರಣಗೊಳಿಸಿ ಶಾಲೆಯ ಅಭಿವೃದ್ಧಿಯ ಕುರಿತು ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪಜಿಲ್ಲಾ ವಿದ್ಯಾಧಿಕಾರಿ ಆಗಸ್ಟಿನ್ ಬರ್ನಾಡ್ ಮಾತನಾಡಿ, ಆಂಗ್ಲಮಾಧ್ಯಮ ಶಾಲೆಗಿಂತ ಸರ್ಕಾರಿ ಶಾಲೆಗೆ ಅತ್ಯುತ್ತಮ ಪ್ರತಿಕ್ರಿಯೆ ಇದೆ. ಹೆತ್ತವರು ಮಕ್ಕಳನ್ನು ಶಾಲೆಗೆ ಸೇರಿಸುವಾಗ ಸೂಕ್ತ ಶಾಲೆಗಳನ್ನು ಆಯ್ಕೆ ಮಾಡಬೇಕು ಎಂದರು. ಸ್ಮಾರ್ಟ್ ಕ್ಲಾಸ್ ಒದಗಿಸಿದ ಇವೈಸಿಸಿ ಕ್ಲಬ್‍ಗೆ ಶಾಲೆಯ ಪರವಾಗಿ ಸನ್ಮಾನಿಸಲಾಯಿತು.
ಕಾಸರಗೋಡು ಬಿಪಿಸಿ ಪ್ರಕಾಶನ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಿಸಾರ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಸುಮತಿ, ಸಿಆರ್‍ಸಿಸಿ ಸಂಯೋಜಕ ಸಾಯಿದ್, ಇವೈಸಿಸಿ ಕ್ಲಬ್ ಅಧ್ಯಕ್ಷ ಖಲೀಲ್ ಎರಿಯಾಲ್, ರಕ್ತೇಶ್ವರೀ ಕ್ಲಬ್ ಅಧ್ಯಕ್ಷ ಪ್ರಸನ್ನ ಕುಮಾರ್, ಮಾತೃ ಸಂಘದ ಅಧ್ಯಕ್ಷೆ ಸಬೀನಾ, ಶಿಕ್ಷಕಿ ಶ್ರೀಜ ಶುಭಾಶಂಸನೆಗೈದರು.
ಅಭಿನಂದನಾ ಸಮಾರಂಭದಲ್ಲಿ ಕಳೆದ 28 ವರ್ಷಗಳ ಕಾಲ ಪಿಟಿಸಿಎಂ ಆಗಿ ಸೇವೆ ಸಲ್ಲಿಸಿದ ಸುಂದರಿ ಹಾಗೂ ಮೂವತ್ತೈದು ವರ್ಷಗಳಿಂದ ಆಹಾರ ಪಾಕದ ಸೇವೆಗೈಯ್ಯುತ್ತಿರುವ ಪದ್ಮಿನಿಯವರನ್ನು ಸನ್ಮಾನಿಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದುವು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಲ್ವಿಯಾ ಮೊಂತೆರೊ ಸ್ವಾಗತಿಸಿ, ಅಮೃತಲಾಲ್ ವಂದಿಸಿದರು. ಶಿಕ್ಷಕ ಮೊಯ್ದೀನ್ ಹಾಗೂ ಶಿಕ್ಷಕಿ ವಿನಿತಾ ಕಾರ್ಯಕ್ರಮ ನಿರೂಪಿಸಿದರು.