ಮಧೂರು: ಇತಿಹಾಸ ಪ್ರಸಿದ್ಧವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮಾರ್ಚ್ 6 ನೇ ತಾರೀಕಿನಂದು ಆರಂಭಗೊಂಡ 48 ದಿನಗಳ ಮಂಡಲ ಸಂಕೀರ್ತನೋತ್ಸವದ ನಿತ್ಯ ಭಜನಾ ಕಾರ್ಯಕ್ರಮವು ಇದೀಗ 30 ದಿನಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ದೀಪ ಬೆಳಗಿಸಿ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಲು ಎಪ್ರಿಲ್ 12 ರಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಕ್ಷೇತ್ರಕ್ಕೆ ಆಗಮಿಸಿ ಆಶೀರ್ವಚನ ನೀಡಲಿರುವರು. 2020 ಎಪ್ರಿಲ್ 13 ರಂದು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳವರು ಪಾದ ಯಾತ್ರೆಯ ಮೂಲಕ ಮಧೂರಿಗೆ ಆಗಮಿಸಿ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು. ಸ್ವಾಮೀಜಿಯವರು ಎಡನೀರಿನಿಂದ ಬೆಳಗ್ಗೆ 6 ಗಂಟೆಗೆ ಪಾದಯಾತ್ರೆ ಆರಂಭಿಸಲಿರುವರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಭಾಗವಹಿಸಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ. ಎಪ್ರಿಲ್ 19 ರಂದು ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಕ್ಷೇತ್ರಕ್ಕೆ ಚಿತ್ತೈಸಿ ಆಶೀರ್ವಚನ ನೀಡಲಿರುವರು. ಮುಂದಿನ ವರ್ಷ (2023) ದಲ್ಲಿ ಬ್ರಹ್ಮಕಲಶೋತ್ಸವ ನಡೆಸುವ ದೃಢ ಸಂಕಲ್ಪದೊಂದಿಗೆ ಕ್ಷೇತ್ರದ ನವೀಕರಣ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗುತ್ತಿದೆ. ಈ ಸಂಕಲ್ಪ ಸಾಕಾರಗೊಳ್ಳಲು ಭಜನಾ ಕಾರ್ಯಕ್ರಮವು ಪ್ರೇರಣೆಯನ್ನು ನೀಡಲಿ ಎಂಬುದು ಸ್ವಾಮೀಜಿಯವರ ಅಭಿಮತವಾಗಿರುವುದು.