ನವದೆಹಲಿ:ಭಾರತೀಯ ಆರ್ಥಿಕತೆಯ ದೃಢತೆಯ ವೌಲ್ಯಮಾಪನವನ್ನು ಮಾಡುವಾಗ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮತ್ತು ವಿದೇಶಿ ಪೋರ್ಟ್ಫೋಲಿಯೊ ಹೂಡಿಕೆದಾರರ (ಎಫ್‌ಪಿಐ) ಹಣದ ಹೊರಹರಿವು ಮುಖ್ಯವಾಗುವುದಿಲ್ಲ,ಆದರೆ ದೇಶದಲ್ಲಿಯೇ ಉಳಿಯುವ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ವಿದೇಶಿ ನೇರ ಹೂಡಿಕೆ (ಎಫ್‌ಡಿಐ)ಯು ಮುಖ್ಯವಾಗಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಹೇಳಿದರು.
'ಎಫ್‌ಡಿಐ ಮೂಲಕ ಹರಿದುಬರುವ ಹಣವು ದೇಶದಲ್ಲಿಯೇ ಉಳಿಯುತ್ತದೆ ಮತ್ತು ನಮಗಾಗಿ ಉದ್ಯೋಗಗಳು ಮತ್ತು ಭವಿಷ್ಯವನ್ನು ಸೃಷ್ಟಿಸುತ್ತದೆ. ಎಫ್‌ಐಐಗಳು ಹಾಗೂ ಎಫ್ಪಿಐಗಳು ಬರಬಹುದು ಮತ್ತು ಹೋಗಬಹುದು. ಆದರೆ ಈಗ ಭಾರತೀಯ ಚಿಲ್ಲರೆ ಹೂಡಿಕೆದಾರರು ಮಾರುಕಟ್ಟೆಯ ಮೇಲಿನ ಯಾವುದೇ ಆಘಾತವನ್ನು ತಡೆದುಕೊಳ್ಳುವುದಾಗಿ ಸಾಬೀತುಗೊಳಿಸಿದ್ದಾರೆ. ಭಾರತೀಯ ಚಿಲ್ಲರೆ ಹೂಡಿಕೆದಾರರು ಆಘಾತವನ್ನು ಹೀರಿಕೊಳ್ಳುವ ಶಕ್ತಿಯನ್ನು ಮಾರುಕಟ್ಟೆಗೆ ಒದಗಿಸಿದ್ದಾರೆ ' ಎಂದು ಲೋಕಸಭೆಯ ಪ್ರಶ್ನೆವೇಳೆಯಲ್ಲಿ ಹೇಳಿದ ಸೀತಾರಾಮನ್,ಯಾವುದೇ ಅಡೆತಡೆಯಿಲ್ಲದೆ ಒಳಬರುತ್ತಿರುವ ಎಫ್‌ಡಿಐ ಅನ್ನು ನ್ಯಾಯಯುತ ಮತ್ತು ವಸ್ತುನಿಷ್ಠ ದೃಷ್ಟಿಯಿಂದ ನೋಡುವುದು ಅಗತ್ಯವಾಗಿದೆ. ಕೋವಿಡ್‌ಗೂ ಮೊದಲು ಭಾರತವು ಅತ್ಯಂತ ಹೆಚ್ಚಿನ ಎಫ್ಡಿಐನ್ನು ಸ್ವೀಕರಿಸುತ್ತಿತ್ತು,ಕೋವಿಡ್ ಸಂದರ್ಭದಲ್ಲಿಯೂ ಅದು ಗಣನೀಯವಾಗಿತ್ತು ಮತ್ತು ಈಗಲೂ ಅದು ಮುಂದುವರಿದಿದೆ ಎಂದರು.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪ್ರಶ್ನೆಗೆ ಸೀತಾರಾಮನ್ ಉತ್ತರಿಸುತ್ತಿದ್ದರು. ಕಳೆದ ಆರು ತಿಂಗಳುಗಳಿಂದಲೂ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಹಿಂದೆಗೆದುಕೊಳ್ಳುತ್ತಿರುವ ಬಗ್ಗೆ ತರೂರ್ ಕಳವಳ ವ್ಯಕ್ತಪಡಿಸಿದ್ದರು.