ಕಾಸರಗೋಡು: ಜಿಲ್ಲೆಯಲ್ಲಿ ನೇಮಕಗೊಂಡಿರುವ ಅಧಿಕಾರಿಗಳು ಸುದೀರ್ಘ ಅವಧಿಗೆ ರಜೆಯ ಮೇಲೆ ತೆರಳುವ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಯೋಜನಾ ನಿರ್ವಹಣಾ ಅಧಿಕಾರಿಗಳು, ಯೋಜನೆ ಅನುಷ್ಠಾನದಲ್ಲಿ ತೊಡಗಿರುವ ಇತರೆ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲ ಅಧಿಕಾರಿಗಳು ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳುವವರೆಗೆ ದೀರ್ಘಾವಧಿ ರಜೆಯಲ್ಲಿ ತೆರಳದಿರುವಂತೆ ಸೂಚಿಸಲಾಗಿದೆ.
ನೌಕರರಿಗೆ ದೀರ್ಘಾವಧಿ ರಜೆ ನೀಡದಿರುವಂತೆ ಜಿಲ್ಲಾಧಿಕಾರಿ ಭಂಡಾರಿ ರಣವೀರಚಂದ್ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದು, ಅನಿವಾರ್ಯ ಸಂದರ್ಭಗಳಲ್ಲಿ ದೀರ್ಘ ರಜೆ ತೆಗೆದುಕೊಳ್ಳುತ್ತಿದ್ದರೆ ಜಿಲ್ಲಾಧಿಕಾರಿಗಳ ಅನುಮತಿ ಪಡೆದುಕೊಳ್ಳುವಂತೆಯೂ ಸೂಚಿಸಲಾಗಿದೆ. ಕಾಸರಗೋಡು ಜಿಲ್ಲೆಗೆ ನೇಮಕಾತಿ ಪಡೆದುಕೊಂಡ ಉದ್ಯೋಗಿಗಳು ಕೆಲಸಕ್ಕೆ ಸೇರ್ಪಡೆಗೊಂಡ ಕೆಲವೇ ದಿವಸಗಳಲ್ಲಿ ದೀರ್ಘಾವಧಿ ರಜೆಯಲ್ಲಿ ತೆರಳುತ್ತಿರುವ ಬಗ್ಗೆ ಲಭಿಸಿದ ದೂರಿನನ್ವಯ ಈ ಆದೇಶ ನೀಡಲಾಗಿದೆ.