ತಿರುವನಂತಪುರಂ: ಪ್ರತಿಪಕ್ಷ ನಾಯಕ ಆಯೋಜಿಸಿದ್ದ ಇಫ್ತಾರ್ ಔತಣಕೂಟದಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಹ್ವಾನಿಸಿದ್ದ ವಿಷಯದ ಬಗ್ಗೆ ಹಿರಿಯ ಕಾಂಗ್ರೆಸ್ಸ್ ಮುಖಂಡ ಹಾಗೂ ಮಾಜೀ ಕೇಂದ್ರ ಸಚಿವ ಕೆವಿ ಥಾಮಸ್ ವ್ಯಾಪಕ ಟೀಕೆ ವ್ಯಕ್ತಡಿಸಿದ್ದಾರೆ. ಸಿಪಿಎಂ ಆಯೋಜಿಸಿದ್ದ ಸಮಾವೇಶಕ್ಕೆ ಅವರ ಆಹ್ವಾನದ ಮೇರೆಗೆ ತೆರಳಿದ್ದ ತನ್ನನ್ನು ಟೀಕಿಸಿದ್ದ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇಬ್ಬಗೆ ನೀತಿಗೆ ಸಾಕ್ಷಿಯಾಗಬೇಕಾಗುತ್ತದೆ ಎಂದು ಅವರು ಸೂಚಿಸಿದರು.
ಈ ಸಂಬಂಧ ಕೆವಿ ಥಾಮಸ್ ಎಐಸಿಸಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ. ಎಐಎಸ್ ಎಫ್ ವಿಚಾರ ಸಂಕಿರಣದಲ್ಲಿ ಯುವ ಮುಖಂಡ ಪಿ.ಸಿ.ವಿಷ್ಣುನಾಥ್ ಶಾಸಕ ಭಾಗವಹಿಸಿದ್ದನ್ನೂ ಕೆ.ವಿ.ಥಾಮಸ್ ವಿವಾದಕ್ಕೀಡುಮಾಡಿರುವರು. ಇಫ್ತಾರ್ ಕೂಟಕ್ಕಾಗಲಿ, ಮುಖ್ಯಮಂತ್ರಿ ಜತೆಗಿನ ಸ್ನೇಹಕ್ಕಾಗಲಿ ನಾನು ವಿರೋಧಿಯಲ್ಲ, ಕೆಪಿಸಿಸಿಯ ಉದ್ಧಟತನವನ್ನೇ ಎತ್ತಿ ತೋರಿಸುತ್ತಿದ್ದೇನೆ ಎಂದು ಕೆ.ವಿ.ಥಾಮಸ್ ತಿಳಿಸಿದರು.
ಘಟನೆ ವಿವಾದವಾದ ಬಳಿಕ ಕೆವಿ ಥಾಮಸ್‍ಗೆ ಪ್ರತ್ಯುತ್ತರ ನೀಡುವ ಮೂಲಕ ವಿಡಿ ಸತೀಶನ್ ರಂಗಕ್ಕೆ ಬಂದಿದ್ದಾರೆ. ಇಫ್ತಾರ್ ಕೂಟ ಎಂದರೆ ಏನೆಂದು ತಿಳಿಯದವರಿಗೆ ಏನು ಹೇಳುವುದು ಎಂದು ವ್ಯಂಗ್ಯವಾಡಿದರು.
ಇಫ್ತಾರ್ ಕೂಟಗಳನ್ನು ಪಕ್ಷ ನಿಷೇಧಿಸುವುದಿಲ್ಲ. ಇದನ್ನು ಕಾಂಗ್ರೆಸ್ ಪಕ್ಷ ಆಯೋಜಿಸಿತ್ತು. ಪಕ್ಷ ನಿಷೇಧ ಮಾಡಿದ್ದರೆ ಇಫ್ತಾರ್ ಕೂಟ ನಡೆಯುತ್ತಿರಲಿಲ್ಲ. ಇಫ್ತಾರ್ ಕೂಟವನ್ನು ಬಹಿಷ್ಕರಿಸುವ ಮನಸ್ಥಿತಿ ನನಗಿಲ್ಲ ಎಂದರು.