ನವದೆಹಲಿ: ಸಿಎನ್‌ಜಿ ಬೆಲೆಯಲ್ಲಿ ತೀವ್ರ ಏರಿಕೆಯಾಗಿದ್ದು, ಸರ್ಕಾರ ಇಂಧನಕ್ಕೆ ಸಬ್ಸಿಡಿ ನೀಡದಿದ್ದರೆ ಅಥವಾ ಪ್ರಯಾಣ ದರವನ್ನು ಹೆಚ್ಚಿಸದಿದ್ದರೆ ಏಪ್ರಿಲ್ 18 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ನಗರದ ಆಟೋ, ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರು ಎಚ್ಚರಿಕೆ ನೀಡಿದ್ದಾರೆ.
ಆಟೋ, ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರ ಸಂಘಗಳು ಶುಕ್ರವಾರ ಜಂತರ್ ಮಂತರ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮತ್ತು ಏಪ್ರಿಲ್ 11 ರಂದು ದೆಹಲಿ ಸೆಕ್ರೆಟರಿಯೇಟ್‌ನಲ್ಲಿ ಸಿಎನ್‌ಜಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲಿವೆ.
ಸಿಎನ್‌ಜಿ ಬೆಲೆ ಕಡಿಮೆ ಮಾಡಬೇಕು ಅಥವಾ ಪ್ರಯಾಣ ದರ ಹೆಚ್ಚಿಸಬೇಕು. ಇಲ್ಲದಿದ್ದರೆ ತಮ್ಮ ಸಂಘ "ಅನಿರ್ದಿಷ್ಟಾವಧಿ ಮುಷ್ಕರ" ನಡೆಸಲಿದೆ ಎಂದು ದೆಹಲಿ-ಎನ್‌ಸಿಆರ್‌ನಲ್ಲಿ ಸುಮಾರು 4 ಲಕ್ಷ ಚಾಲಕರು ಸದಸ್ಯರಾಗಿದ್ದಾರೆ ಎಂದು ಹೇಳಿಕೊಂಡಿರುವ ಸರ್ವೋದಯ ಡ್ರೈವರ್ಸ್ ವೆಲ್ಫೇರ್ ಅಸೋಸಿಯೇಷನ್ ನ ರವಿ ರಾಥೋರ್ ಅವರು ಹೇಳಿದ್ದಾರೆ.
"ನಾವು ಸಿಎನ್‌ಜಿ ದರ ಇಳಿಕೆಗೆ ಒತ್ತಾಯಿಸುತ್ತಿದ್ದೇವೆ. ಒಂದು ವೇಳೆ ಬೆಲೆ ಕಡಿತಗೊಳಿಸಲು ಸಾಧ್ಯವಾಗದಿದ್ದರೆ ಬೆಲೆ ಏರಿಕೆಯನ್ನು ನಿಭಾಯಿಸಲು ಪ್ರಯಾಣ ದರವನ್ನು ಹೆಚ್ಚಿಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ.
"ಕಳೆದ 7-8 ವರ್ಷಗಳಿಂದ ಓಲಾ ಮತ್ತು ಉಬರ್ ಪ್ರಯಾಣ ದರಗಳಲ್ಲಿ ಯಾವುದೇ ಪರಿಷ್ಕರಣೆ ಆಗಿಲ್ಲ. ನಾಳೆ ಪ್ರತಿಭಟನೆಯಲ್ಲಿ ನಾವು ಅನಿರ್ದಿಷ್ಟಾವಧಿ ಮುಷ್ಕರಕ್ಕೂ ಕರೆ ನೀಡುತ್ತೇವೆ" ಎಂದು ರಾಥೋರ್ ಪಿಟಿಐಗೆ ತಿಳಿಸಿದ್ದಾರೆ.