ದೆಹಲಿ: ಕೇಜ್ರಿವಾಲ್ ಸರ್ಕಾರದ ಶಿಕ್ಷಣ ಮಾದರಿಯ ಅಧ್ಯಯನ ನಡೆಸಲು ಕೇರಳದ ಅಧಿಕಾರಿಗಳು ದೆಹಲಿಯ ಶಾಲೆಗೆ ಭೇಟಿ ನೀಡಿದ್ದರು ಎಂದು ಸುಳ್ಳು ಹೇಳಿದ ಎಎಪಿ ಶಾಸಕಿ ಅತಿಶಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಭಾನುವಾರ ಒತ್ತಾಯಿಸಿದೆ.
ಏನಿದು ವಿವಾದ?
'ಕೇರಳದ ಅಧಿಕಾರಿಗಳಿಗೆ ಕಲ್ಕಾಜಿಯಲ್ಲಿರುವ ನಮ್ಮ ಶಾಲೆಯೊಂದರಲ್ಲಿ ಆತಿಥ್ಯ ನೀಡುತ್ತಿರುವುದು ಖುಷಿಯಾಗಿದೆ. ಅವರು ನಮ್ಮ ಶಿಕ್ಷಣ ಮಾದರಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಅಳವಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಇದು ಅರವಿಂದ ಕೇಜ್ರಿವಾಲ್ ಅವರ ಸರ್ಕಾರದ ರಾಷ್ಟ್ರ ನಿರ್ಮಾಣದ ಕಲ್ಪನೆ. ಸಹಯೋಗದೊಂದಿಗೆ ಅಭಿವೃದ್ಧಿ' ಎಂದು ಶಾಸಕಿ ಆತಿಶಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು. ಜತೆಗೆ ಕೇರಳ ನಿಯೋಗದ ಫೋಟೊವನ್ನೂ ಹಂಚಿಕೊಂಡಿದ್ದರು.
ಆತಿಶಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ, 'ಕೇರಳದ ಯಾವುದೇ ಅಧಿಕಾರಿಗಳು ದೆಹಲಿಗೆ ಭೇಟಿ ನೀಡಿಲ್ಲ. ಇದೇ ವೇಳೆ ಕಳೆದ ತಿಂಗಳು ಕೇರಳ ಮಾದರಿ ಅಧ್ಯಯನಕ್ಕೆ ದೆಹಲಿಯಿಂದ ಬಂದಿದ್ದ ಅಧಿಕಾರಿಗಳಿಗೆ ನಾವು ಆತಿಥ್ಯ ನೀಡಿದ್ದೇವೆ. ಎಎಪಿ ಶಾಸಕಿ ಆತಿಶಿ ಅವರು ಯಾವ ಅಧಿಕಾರಿಗಳನ್ನು ಸ್ವಾಗತಿಸಿದ್ದಾರೆ ಎಂದು ತಿಳಿಯಲು ನಾವು ಬಯಸುತ್ತೇವೆ' ಎಂದು ಭಾನುವಾರ ಹೇಳಿದ್ದರು.
ಕ್ರಮಕ್ಕೆ ಬಿಜೆಪಿ ಆಗ್ರಹ
ಕೇರಳದ ಯಾವುದಾದರೂ ಅಧಿಕೃತ ನಿಯೋಗ ಶನಿವಾರ ದೆಹಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿದೆಯೇ ಅಥವಾ ಅತಿಶಿ ಅವರ ಸುಳ್ಳು ಹೇಳಿಕೆಗೆ ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದನ್ನು ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸ್ಪಷ್ಟಪಡಿಸಬೇಕೆಂದು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಆಗ್ರಹಿಸಿದ್ದಾರೆ.
'ರಾಜಕೀಯ ಗಿಮಿಕ್‌ಗಾಗಿ ಶಿಷ್ಟಾಚಾರ ಉಲ್ಲಂಘಿಸಿ, ಅತಿಶಿ ಇಂತಹ ಸುಳ್ಳುಗಳನ್ನು ಹೇಳಲು ಹೇಗೆ ಸಾಧ್ಯ ಎಂಬುದರ ಬಗ್ಗೆ ನಮಗೆ ಆಶ್ಚರ್ಯವಿದೆ' ಎಂದೂ ಕಪೂರ್ ಹೇಳಿದ್ದಾರೆ.