ಕುಂಬಳೆ: ಸಂಗೀತೋಪಕರಣ ವಾದಕನಾಗಿ ಜನಾನುರಾಗಿ ವ್ಯಕ್ತಿತ್ವದಿಂದ ನಾಡ ಜನತೆಯ ಪ್ರೀತಿಪಾತ್ರರಾಗಿದ್ದ ಹಿರಿಯ ಕಲಾವಿದ ಸದಾಶಿವ ಅನಂತಪುರ ಅವರ ಪ್ರಥಮ ಸಂಸ್ಮರಣಾ ಸಮಾರಂಭ ಎ.3ರಂದು ಅನಂತಪುರದಲ್ಲಿ ನಡೆಯಲಿದೆ. ತದಂಗವಾಗಿ ಅವರ ಸ್ಮರಣೆಯಲ್ಲಿ ನೀಡಲಾಗುವ ಗೌರವ ಸ್ಮøತಿ ಸನ್ಮಾನಕ್ಕೆ ಕಾಸರಗೋಡಿನ ಹಿರಿಯ ಸಂಗೀತಜ್ಞೆ ರಾಧಾಮುರಳೀಧರ್ ಅರ್ಹರಾಗಿದ್ದಾರೆ. ಎ.3ರಂದು ಅಪರಾಹ್ನ 2.30ರಿಂದ ಅನಂತಪುರದ ಅನಂತಶ್ರೀ ಸಭಾಭವನದಲ್ಲಿ ಸಂಸ್ಮರಣೆಯೊಂದಿಗೆ ಸನ್ಮಾನ ಗೌರವ ನಡೆಯಲಿದೆ.
ಕಳೆದ 6 ದಶಕಗಳಿಂದ ಕಾಸರಗೋಡಿನ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ರಾಧಾಮುರಳೀಧರ್ ಪ್ರಸಿದ್ಧ ಸಂಗೀತ ಮನೆತನವಾದ ಆಲಂಪಾಡಿ ಮನೆತನದವರು. ವಿದ್ವಾನ್ ಆಲಂಪಾಡಿ ವೆಂಕಟೇಶ್ ಶ್ಯಾನುಭೋಗರ ಪುತ್ರಿ. 8ನೇ ವಯಸ್ಸಿನ ಎಳೆ ಹರೆಯದಲ್ಲೇ ಕಾರ್ಯಕ್ರಮ ನೀಡಲಾರಂಭಿಸಿದ್ದ ಇವರು ವಿದ್ವತ್ ಗ್ರೇಡಿನಲ್ಲಿ ಪ್ರಥಮ ಶ್ರೇಣಿ ಪಡೆದವರು. ಮಹಾರಾಷ್ಟ್ರ ಸಹಿತ ದಕ್ಷಿಣ ಭಾರತದಾದ್ಯಂತ 800ಕ್ಕೂ ಅಧಿಕ ವೇದಿಕೆಗಳಲ್ಲಿ ಸಂಗೀತ ಕಛೇರಿ ನಡೆಸಿದವರು. ಅಸಂಖ್ಯ ಭಕ್ತಿ, ಭಾವಗೀತೆಗಳಿಗೆ ರಾಗ ಸಂಯೋಜಿಸಿದವರು. ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವಿತ್ತು ಕಲಾ ಪರಂಪರೆ ಬೆಳೆಸಿದವರು. ಅನೇಕ ಸಂಗೀತ ಪ್ರಾತ್ಯಕ್ಷಿಕೆ, ಕಮ್ಮಟದಲ್ಲಿ ಕಲಾವಿದೆಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡವರು.ಸಂಗೀತ ಹಾಡುಗಾರಿಕೆ, ವಯಲಿನ್ ನುಡಿಸುವಿಕೆ, ಕತೆ, ಕವನ, ಲೇಖನ ಬರೆಯುವಿಕೆ ಸಹಿತ ಸೃಜನಶೀಲತೆಯ ಬಹುಮುಖಿ ಪ್ರತಿಭೆಯಾದ ಇವರು ಮಲ್ಲ ಕ್ಷೇತ್ರದ ಸುಪ್ರಭಾತ, ಭಕ್ತಿಗೀತೆ, ಸುಬ್ರಹ್ಮಣ್ಯ ಭಕ್ತಿಗೀತೆಗಳ ಆಡಿಯೋ ಕ್ಯಾಸೆಟ್ಟಿಗೆ ಹಾಡಿದ್ದಾರೆ. ಕಳೆದ 3ದಶಕದಿಂದ ಮಂಗಳೂರು ಆಕಾಶವಾಣಿಯ ಬಿ ಗ್ರೇಡ್ ಕಲಾವಿದೆ. 150ಕ್ಕೂ ಅಧಿಕ ಶಿಷ್ಯರನ್ನು ಹೊಂದಿರುವ ಇವರು ಜನಪ್ರಿಯತೆಯ ಜಾಡು ಹಿಡಿದು ನಡೆದವರಲ್ಲ, ಶುದ್ಧ ಸಂಗೀತ ಪರಂಪರೆಯ ಪಥ ಅನುಸರಿಸಿದವರು.
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಸಂಗೀತ ಪರೀಕ್ಷೆಯ ಪರೀಕ್ಷಕರಾಗಿರುವ ಇವರು ಕಾಸರಗೋಡಿನ ಹತ್ತಾರು ಸಂಘಸಂಸ್ಥೆಗಳ ಪದಾಧಿಕಾರಿಯಾಗಿ, ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಾರೆ. ಅನೇಕ ಪ್ರಶಸ್ತಿ, ಸನ್ಮಾನಗಳಿಂದ ಪುರಸ್ಕøತರಾದ ಇವರದ್ದು ಆಡಂಬರಗಳಿಲ್ಲದ, ಸದ್ದಿಲ್ಲದ ಸಂಗೀತ ಸಾಧನೆ. ಈ ಸಾಧನೆ ಮತ್ತು ಕೊಡುಗೆಯ ಹಿರಿತನ ಮಾನಿಸಿ ಕಲಾವಿದ ಸದಾಶಿವ ಅನಂತಪುರ ಸ್ಮರಣೆಯಲ್ಲಿ ನೀಡಲಾಗುವ ಪ್ರಥಮ ಸ್ಮøತಿ ಸನ್ಮಾನವನ್ನು ರಾಧಾಮುರಳೀಧರ್ ಅವರಿಗೆ ನೀಡಲಾಗುತ್ತಿದೆ.