ನವದೆಹಲಿ:ವಾಹನಗಳ ಸದೃಢತೆ (ಫಿಟ್ನೆಸ್) ಪರೀಕ್ಷೆಯನ್ನು ಕಡ್ಡಾಯವಾಗಿ ಯಾಂತ್ರೀಕೃತ (ಅಟೋಮೇಟೆಡ್) ಪರೀಕ್ಷಾ ಕೇಂದ್ರ (ಎಟಿಎಸ್)ಗಳಲ್ಲಿ ನಡೆಸುವುದನ್ನು ಕೇಂದ್ರ ಸರಕಾರವು ಮುಂದಿನ ವರ್ಷದ ಏಪ್ರಿಲ್‌ನಿಂದ ಹಂತಹಂತವಾಗಿ ಜಾರಿಗೆ ತರಲಿದೆ.
ಭಾರೀ ಸರಕು ಸಾಗಣೆ ವಾಹನಗಳು ಹಾಗೂ ಭಾರೀ ಪ್ರಯಾಣಿಕ ಮೋಟಾರ್ ವಾಹನಗಳ ಫಿಟ್ನೆಸ್ ಪರೀಕ್ಷೆಯನ್ನು ಎಟಿಎಸ್‌ಗಳಲ್ಲಿ ನಡೆುವುದನ್ನು 2023ರ ಏಪ್ರಿಲ್ 1ರಿಂದ ಕಡ್ಡಾಯಗೊಳಿಸಲಾಗುವುದಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ (ಎಂಓಆರ್‌ಟಿಎಚ್) ತಿಳಿಸಿದೆ.
ಆಟೋಮೇಟೆಡ್ ಪರೀಕ್ಷಾ ಕೇಂದ್ರಗಳಲ್ಲಿ ವಾಹನಗಳ ಸದೃಢತೆಯ ತಪಾಸಣೆಗಾಗಿ ನಡೆಸಲಾಗುವ ವಿವಿಧ ಪರೀಕ್ಷೆಗಳನ್ನು ಯಾಂತ್ರಿಕ ಉಪಕರಣಗಳ ಮೂಲಕ ನಡೆಸಲಾಗುವುದು.
ಮಧ್ಯಮಗಾತ್ರದ ಸರಕು ಸಾಗಣೆ ವಾಹನಗಳು ಹಾಗೂ ಮಧ್ಯಮ ಗಾತ್ರದ ಪ್ರಯಾಣಿಕ ಮೋಟಾರು ವಾಹನಗಳು ಹಾಗೂ ಲಘು ಮೋಟಾರ್ ವಾಹನಗಳು (ಸಾರಿಗೆ) ಅಟೋಮೆಟೆಡ್ ಕೇಂದ್ರಗಳಲ್ಲಿ ಫಿಟ್ನೆಸ್ ಪರೀಕ್ಸೆಗೆ ಒಳಗಾಗುವುದನ್ನು 2024ರ ಜೂನ್ 1ರಿಂದ ಕಡ್ಡಾಯಗೊಳಿಸಲಾಗುವುದು.
1989ರ ಕೇಂದ್ರೀಯ ಮೋಟಾರ್ ವಾಹನಗಳ ನಿಯಾವಳಿಗಳ, 175ನೇ ನಿಯಮಕ್ಕೆ ಅನುಗುಣವಾಗಿ ಅಟೋಮೇಟೆಡ್ ಟೆಸ್ಟಿಂಗ್ ಸ್ಟೇಶನ್‌ಗಳ ಮೂಲಕ ಮೋಟಾರು ವಾಹನಗಳ ಫಿಟ್ನೆಸ್ ಪರೀಕ್ಷೆ ನಡೆಸುವುದನ್ನು ಕಡ್ಡಾಯಗೊಳಿಸಿ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು 2022ರ ಎಪ್ರಿಲ್ 5ರಂದು ಅಧಿಸೂಚನೆಯೊಂದನ್ನು ಜಾರಿಗೊಳಿಸಿದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ವಿಶೇಷ ಉದ್ದೇಶದ ವಾಹನಗಳು, ರಾಜ್ಯ ಸರಕಾರಗಳು, ಸಂಘಗಳಿಗೆ ಎಟಿಎಸ್ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡುವ ಸಾಧ್ಯತೆಯಿದೆಯೆಂದು ಕೇಂದ್ರ ಸರಕಾರವು ಕಳೆದ ವಾರ ಹೇಳಿಕೆಯೊಂದರಲ್ಲಿ ತಿಳಿಸಿತ್ತು.
ವೈಯಕ್ತಿಕ ವಾಹನಗಳ (ಸಾರಿ ಗೆಯೇತರ) ಫಿಟ್ನೆಸ್ ಪರೀಕ್ಷೆಯನ್ನು, ವಾಹನ ನೋಂದಣಿಯಾದ 15 ವರ್ಷಗಳ ಆನಂತರ ನಡೆಸಲಾಗುತ್ತದೆ. ವಾಣಿಜ್ಯ ವಾಹನಗಳು (ಸಾರಿಗೆ) ಎಂಟು ವರ್ಷಗಳಾಗುವವರೆಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ಹಾಗೂ ಎಂಟು ವರ್ಷಗಳಿಗಿಂತಲೂ ಹಳೆಯದಾದ ವಾಣಿಜ್ಯ (ಸಾರಿಗೆ) ವಾಹನಗಳು ಒಂದು ವರ್ಷಕ್ಕೊಮ್ಮೆ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.