ಹೈದರಾಬಾದ್: ಕುಖ್ಯಾತ ಅಂತಾರಾಷ್ಚ್ರೀಯ ಉಗ್ರ ಸಂಘಟನೆ ಐಸಿಸ್ ಗೆ ಯುವಕರ ಸೆಳೆಯುತ್ತಿದ್ದ ವ್ಯಕ್ತಿಯನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಭಯೋತ್ಪಾದಕ ಸಂಘಟನೆ ಪರ ಪ್ರಚಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಹೈದರಾಬಾದ್ ಸಿಸಿಎಸ್ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದು, ಫಲಕ್‌ನುಮಾ ನಿವಾಸಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಕೆಲವು ತಿಂಗಳುಗಳಿಂದ ಹೈದರಾಬಾದ್ನಲ್ಲಿ ಐಸಿಸ್ ಪರ ಸಹಾನುಭೂತಿ ಹೊಂದಿದವರನ್ನು ಸಂಪರ್ಕಿಸಲು ಈತ ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ಬಳಸುತ್ತಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ಈ ಹಿಂದೆಯೂ ಆರೋಪಿ ಹಲವು ಬಾರಿ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈತನ ಬಂಧನಕ್ಕೆ ಬಲೆ ಬೀಸಿದ್ದ ಅಧಿಕಾರಿಗಳು ಐಪಿ ವಿಳಾಸದ ಆಧಾರದ ಮೇಲೆ ಬಂಧಿಸಿ, ರಿಮಾಂಡ್ ಹೋಮ್ಗೆ ಕಳುಹಿಸಿದ್ದಾರೆ. ವಿಶ್ವದಾದ್ಯಂತ ಯುವಕರನ್ನು ಜಿಹಾದಿಗಳನ್ನಾಗಿ ಸಿದ್ಧಪಡಿಸುತ್ತಿರುವ ಐಸಿಸ್ ಸದಸ್ಯರೊಂದಿಗೆ ಈತ ನಿರಂತರ ಸಮಾಲೋಚನೆ ನಡೆಸುತ್ತಿದ್ದ. ಆರೋಪಿ ಐಸಿಸ್ ಸಂಘಟನೆಯಿಂದ ಹವಾಲಾ ಮೂಲಕ ಹಣ ಸಂಗ್ರಹಿಸುತ್ತಿದ್ದನು ಎಂದು ತಿಳಿದುಬಂದಿದೆ.
ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಜಿಹಾದ್ ಕಡೆಗೆ ಆಕರ್ಷಿತರಾಗಲು ವಿಡಿಯೋಗಳನ್ನು ಕಳುಹಿಸುತ್ತಿದ್ದ. ಇದಕ್ಕಾಗಿಯೇ ವಿಶೇಷವಾಗಿ ಅಪ್ಲಿಕೇಶನ್‌ಗಳನ್ನು ರಚಿಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.