ಕಾಸರಗೋಡು: ಹೋಟೆಲ್‍ಗಳಲ್ಲಿ ಎಂದಿಗೂ ಏಕೀಕೃತ ದರ ಜಾರಿ ಸಾಧ್ಯವಿಲ್ಲ ಎಂದು ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಜಿ.ಎಸ್. ಜಯಪಾಲ್ ತಿಳಿಸಿದ್ದಾರೆ. ಅವರು ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರತಿ ಹೋಟೆಲ್‍ನಲ್ಲಿ ವಿಭಿನ್ನವಾಗಿ ಆಹಾರವನ್ನು ನೀಡಲಾಗುತ್ತದೆ. ಆಯ್ಕೆ ಮಾಡುವ ಹಕ್ಕು ಗ್ರಾಹಕರಿಗೆ ಇರುತ್ತದೆ. ಪ್ರಸಕ್ತ ಕೇರಳದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಆಹಾರ ನೀಡಲಾಗುತ್ತಿದೆ. ಹಲವು ಬಾರಿ ನಡೆದ ಚರ್ಚೆಗಳ ಹೊರತಾಗಿಯೂ ಬೆಲೆ ಹೆಚ್ಚಳ"ಅಸಾಧ್ಯ" ಎಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.
ಅಡುಗೆ ಅನಿಲದ ಬೆಲೆಯ ಗಣನೀಯ ಹೆಚ್ಚಳದಿಂದ ಸಣ್ಣ ಹೋಟೆಲ್ ಉದ್ಯಮ ವಿನಾಶದತ್ತ ಸಾಗಲಿದೆ. ಏಪ್ರಿಲ್ ತಿಂಗಳಲ್ಲಿ ಮಾತ್ರವಾಗಿ ಪ್ರತಿ ಸಿಲಿಂಡರಲ್ಲಿ ಸುಮಾರು 250 ರೂ. ಹೆಚ್ಚಳವುಂಟಾಗಿದೆ. ಇದರಿಂದ ದಿನಕ್ಕೆ 750 ರಿಂದ 2,500 ರೂ.ವರೆಗೆ ಹೆಚ್ಚುವರಿ ಹೊರೆಯುಂಟಾಗುತ್ತಿದೆ. ದೇಶೀಯ ಅನಿಲದ ಮೇಲಿನ ಜಿಎಸ್‍ಟಿ ಶೇ.5ರಷ್ಟಿದ್ದರೆ ಗೃಹೇತರ ಅನಿಲದ ಮೇಲಿನ ತೆರಿಗೆ ಶೇ.18ರಷ್ಟಿದೆ. ಇದನ್ನು ಶೇ.5ಕ್ಕೆ ಇಳಿಸಲು ಸರ್ಕಾರ ಎಲ್ಲ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಯೂಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆ ಮತ್ತು ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವುದು ಹೋಟೆಲ್ ವಲಯಕ್ಕೆ ಭಾರಿ ಹೊಡೆತ ನೀಡಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಬಾಲಕೃಷ್ಣ ಪೆÇದುವಾಳ್, ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಗಜಾಲಿ, ಜಿಲ್ಲಾಧ್ಯಕ್ಷ ಅಬ್ದುಲ್ಲಾ ತಾಜ್, ಜಿಲ್ಲಾ ಕಾರ್ಯದರ್ಶಿ ನಾರಾಯಣ ಪೂಜಾರಿ, ಕೋಶಾಧಿಕಾರಿ ರಾಜನ್ ಕಲಕ್ಕರ, ಅಜೇಶ್ ನುಳ್ಳಿಪಾಡಿ, ಸತ್ಯನಾಥನ್ ಬೋವಿಕಾನಂ ಉಪಸ್ಥಿತರಿದ್ದರು.