ಮಂಗಳೂರು:ಯಕ್ಷಗಾನ ತೆಂಕುತಿಟ್ಟು ಕ್ಷೇತ್ರದ ಪಾರಂಪರಿಕ ಮನೆತನವಾದ ಬಲಿಪ ಪರಂಪರೆಯ ಖ್ಯಾತ ಯುವ ಭಾಗವತ, ಕಟೀಲು ಮೇಳದ ಪ್ರಧಾನ ಭಾಗವತ ಪ್ರಸಾದ ಬಲಿಪ ಭಾಗವತರು ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನ ಹೊಂದಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಈ ಬಾರಿ ಮೇಳದ ತಿರುಗಾಟದಲ್ಲಿ ಇರಲಿಲ್ಲ. ತೆಂಕುತಿಟ್ಟು ಯಕ್ಷಗಾನದ ಬಲಿಪ ಪರಂಪರೆಯ ಬಲಿಪ ನಾರಾಯಣ ಭಾಗವತರ ಪುತ್ರರಾದ ಬಲಿಪ ಪ್ರಸಾದ್ ಭಾಗವತರು ರಕ್ತಗತವಾಗಿ ಬಂದಿದ್ದ ಯಕ್ಷಗಾನ ಭಾಗವತಿಕೆಯನ್ನು ಮೈಗೂಡಿಸಿಕೊಂಡು ಕಟೀಲು ಎರಡನೆಯ ಮೇಳದ ಪ್ರಧಾನ ಭಾಗವತರಾಗಿದ್ದರು. ತಂದೆಯ ಬಳಿಕ ಬಲಿಪ ಶೈಲಿಯ ಭಾಗವತಿಕೆ ಮೂಲಕ ಮಿಂಚಿದ್ದರು. ತಮ್ಮದೇ ವಿಶಿಷ್ಟ ಕೋಲ್ಮಿಂಚಿನ ಧ್ವನಿಯ ಮೂಲಕ ಅಪರಿಮಿತ ಅ|ಭಿಮಾನಿಗಳನ್ನು ಅಲ್ಪಾವದಿಯಲ್ಲೇ ಸಂಪಾದಿಸಿದ್ದರು. ಸದಾ ನಗುಮೊಗದ, ನಿಗರ್ವಿ ವ್ಯಕ್ತಿತ್ವದ ಪ್ರಸಾದಣ್ಣನ ಅಗಲುವಿಗೆ ಸಾವಿರಾರು ಅ|ಭಿಮಾನಿಗಳ ದಿಗ್ಭ್ರಮೆಗೆ ಕಾರಣವಾಗಿದೆ.
ಮೃತರು ತಂದೆ, ಪತ್ನಿ, ಮೂವರು ಹೆಣ್ಣು ಮಕ್ಕಳು, ಸಹೋದರನ ಸಹಿತ ಸಾವಿರಾರು ಯಕ್ಷಾಭಿಮಾನಿಗಳನ್ನು ಅಗಲಿದ್ದಾರೆ.