ಕಾಸರಗೋಡು: ಉತ್ತರ ಮಲಬಾರಿನಲ್ಲಿ ಭೂತ ಕೋಲಧಾರಿಗಳು ಹಾಗೂ ಆಚಾರ ಸ್ಥಾನಿಕರ ವೇತನವನ್ನು ಎಂಟು ತಿಂಗಳಿನಿಂದ ಸ್ಥಗಿತಗೊಳಿಸಲಾಗಿದ್ದು, ಈ ಸಮುದಾಯದ ದಯನೀಯ ಬದುಕನ್ನು ಕಂಡೂಕಾಣದಂತೆ ವರ್ತಿಸುತ್ತಿರುವ ಸರ್ಕಾರದ ಧೋರಣೆ ಖಂಡನೀಯ ಎಂದು ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ.
ಬಾಕಿಯಾಗಿರುವ ಎಂಟು ತಿಂಗಳ ವೇತನವನ್ನು ವಿಷುವಿಗೆ ಮೊದಲು ಒಂದೇ ಕಂತಿನಲ್ಲಿ ನೀಡಬೇಕು. ಮೃತಪಟ್ಟ ಆಚಾರ ಸ್ಥಾನಿಕರ ಬದಲು ಆಚಾರರಂಗಕ್ಕೊಳಪಟ್ಟವರನ್ನು ನೇಮಿಸುವಂತೆ ಸಲ್ಲಿಸಿದ ಮನವಿಯನ್ನು ಐದು ವರ್ಷವಾದರೂ ಪುರಸ್ಕರಿಸಿಲ್ಲ. ಇಂತಹ 200ಕ್ಕೂ ಹೆಚ್ಚು ಆಚಾರವಂತರು ವೇತನ ಅಥವಾ ಇತರ ಕಲ್ಯಾಣ ಪಿಂಚಣಿಗಳನ್ನು ಪಡೆಯದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರನ್ನು ಹೋರಾಟಕ್ಕೆ ಎಳೆದು ತರುತ್ತಿರುವುದು ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಮುಖ್ಯಮಂತ್ರಿ ಹಾಗೂ ಮುಜರಾಯಿಖಾತೆ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.