ಕಾಶ್ಮೀರಿ ಪಂಡಿತರ ಮೇಲೆ 1990-91ರಲ್ಲಿ ನಡೆದ ಹಿಂಸಾಚಾರ ಮತ್ತು ಅದರ ಪರಿಣಾಮವಾಗಿ ಅವರು ಕಣಿವೆಯಿಂದ ವಲಸೆ ಹೋಗಬೇಕಾದಂಥ ಸನ್ನಿವೇಶ ಸೃಷ್ಟಿಯಾದದ್ದು, ದೇಶದ ಈಚೆಗಿನ ಇತಿಹಾಸದ ಭಯಾನಕ ಹಾಗೂ ನಾಚಿಕೆಗೇಡಿನ ಅಧ್ಯಾಯ. ಪಂಡಿತರ ಸಂಕಟಗಳು ಇನ್ನೂ ಮುಂದುವರಿದಿವೆ.
ಇತ್ತೀಚೆಗೆ ಬಿಡುಗಡೆಯಾಗಿರುವ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಚಲನಚಿತ್ರ 'ದಿ ಕಾಶ್ಮೀರ್ ಫೈಲ್ಸ್' ಮುಖ್ಯವಾಗಿ ಜಮ್ಮು ಸೇರಿದಂತೆ ದೇಶದ ಇತರ ಭಾಗಗಳಿಗೆ ಒತ್ತಾಯಪೂರ್ವಕವಾಗಿ ವಲಸೆ ಹೋಗುವಂತಾದ ಕಾಶ್ಮೀರಿ ಪಂಡಿತರ ಅನುಭವ ಕಥನವನ್ನು ಒಳಗೊಂಡಿದೆ. ಅವರ ಈ ವಲಸೆ, ಅದಕ್ಕೆ ಕಾರಣವಾದಂತಹ ಪರಿಸ್ಥಿತಿ, ಆ ಸಂದರ್ಭದಲ್ಲಿ ಅವರ ನೆರವಿಗೆ ನಿಲ್ಲುವಲ್ಲಿ ಆಗಿನ ಸರ್ಕಾರದ ವೈಫಲ್ಯವು ಕಾಂಗ್ರೆಸ್ ವಿರುದ್ಧದ ಬಿಜೆಪಿಯ ಪ್ರಚಾರ ವೈಖರಿಯಲ್ಲಿನ ಪ್ರಮುಖ ಅಂಶಗಳಾಗಿವೆ.
ಈಗ ಅಂತಹದ್ದೊಂದು ಪ್ರಚಾರದ ಭಾಗವಾಗಿಯೇ ಈ ಸಿನಿಮಾವನ್ನು ಪರಿಗಣಿಸಬೇಕಾಗುತ್ತದೆ. ಏಕೆಂದರೆ, ಚಿತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ದೊರೆತಿರುವ ಅನುಮೋದನೆ ಹಾಗೂ ಬಿಜೆಪಿ ಆಡಳಿತ ಇರುವ ರಾಜ್ಯಗಳು ಚಿತ್ರಕ್ಕೆ ನೀಡಿರುವ ತೆರಿಗೆ ವಿನಾಯಿತಿಗಳಿಂದ ಇದು ಸ್ಪಷ್ಟವಾಗುತ್ತದೆ. ದೇಶದ ಏಕತೆ, ಸಮಗ್ರತೆಯಂತಹ ಉತ್ತಮ ಕಾರಣಗಳಿಗಾಗಿ ಸರ್ಕಾರಗಳು ಚಲನಚಿತ್ರಗಳನ್ನು ಪ್ರೋತ್ಸಾಹಿಸಬಹುದು ಮತ್ತು ಬೆಂಬಲಿಸಬಹುದು. ಆದರೆ 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರದ ವಿಷಯದಲ್ಲಿ ಸರ್ಕಾರವು ಖಂಡಿತವಾಗಿಯೂ ಇದಕ್ಕೆ ತದ್ವಿರುದ್ಧವಾದ ಕಾರಣಕ್ಕಾಗಿ ಇಂತಹ ಕೆಲಸವನ್ನು ಮಾಡುತ್ತಿದೆ.
1990ರ ಘಟನಾವಳಿಗಳನ್ನು ಮಂಡಿಸುವ ವಿಷಯದಲ್ಲಿ ಚಲನಚಿತ್ರವು ಸ್ವಾತಂತ್ರ್ಯವನ್ನು ಮಿತಿಮೀರಿ ಬಳಸಿಕೊಂಡಿದೆ ಮತ್ತು ಉತ್ಪ್ರೇಕ್ಷಿತ ಅಂಶಗಳನ್ನು ಪ್ರಸ್ತುತಪಡಿಸಿದೆ. ಚರಿತ್ರೆಯನ್ನು ಯಥಾರೀತಿಯಲ್ಲಿ ಕಟ್ಟಿಕೊಡುವುದಾಗಿ ಚಿತ್ರವು ಹೇಳುತ್ತದಾದರೂ ಅಂತಹ ನಿರೀಕ್ಷೆಯನ್ನು ಅದು ಹುಸಿಗೊಳಿಸಿದೆ ಮತ್ತು ಸಾಲದೆಂಬಂತೆ ಸುಳ್ಳು ವಿವರಗಳನ್ನು ಸಹ ನೀಡುತ್ತದೆ. ಉದಾಹರಣೆಗೆ, ಚಲನಚಿತ್ರದಲ್ಲಿ ನೀಡಿರುವಂತೆ ಪ್ರಕರಣದಲ್ಲಿ ಹತರಾದವರು ಮತ್ತು ಸ್ಥಳಾಂತರಗೊಂಡವರ ಸಂಖ್ಯೆಯು ಕಾಶ್ಮೀರಿ ಪಂಡಿತರ ಸಂಘಟನೆಗಳು ಮಾತ್ರವಲ್ಲ, ಸ್ವತಃ ಸರ್ಕಾರ ನೀಡಿದ್ದಕ್ಕಿಂತಲೂ ಅತ್ಯಂತ ಹೆಚ್ಚಾಗಿದೆ. ಈ ಹತ್ಯೆಗಳಿಗೆ ಕಾಂಗ್ರೆಸ್ ಪಕ್ಷ, ಅದರ ನೇತೃತ್ವದ ಸರ್ಕಾರಗಳು ಮತ್ತು ಅದರ ನಾಯಕರನ್ನು ದೂಷಿಸುವುದಕ್ಕೆ ಇಡೀ ಪ್ರಯತ್ನವು ಮೀಸಲಾಗಿದೆ. ಎಡಪಂಥೀಯ ಉದಾರವಾದಿಗಳು ಮತ್ತು ಕಾಶ್ಮೀರಿ ಮುಸ್ಲಿಮರು ಸಹ ಇಲ್ಲಿ ಖಳನಾಯಕರಾಗಿದ್ದಾರೆ. ಕೇಂದ್ರದಲ್ಲಿ ಆಗ ಇದ್ದುದು ಬಿಜೆಪಿ ಬೆಂಬಲಿತ ಸರ್ಕಾರ, ಹೀಗಾಗಿ ಆ ಸಂದರ್ಭದಲ್ಲಿ ಮತ್ತು ನಂತರದಲ್ಲಿ ನಡೆದ ವಿದ್ಯಮಾನಗಳಿಗೆ ಆ ಪಕ್ಷವೂ ಹೊಣೆಗಾರ ಆಗುತ್ತದೆ. ಆದರೆ ಇಂತಹ ಅನೇಕ ಸತ್ಯಸಂಗತಿಗಳನ್ನು ಚಲನಚಿತ್ರವು ಮರೆಮಾಚಿದೆ.
ಇತಿಹಾಸವನ್ನು ತಿರುಚುವುದು, ಉದ್ರೇಕಕಾರಿಯಾಗಿ ಅದನ್ನು ಬಿಂಬಿಸುವುದು ಮತ್ತು ಪ್ರಚೋದನಕಾರಿಯಾಗಿ ಮಿಥ್ಯೆಗಳನ್ನು ನಿರೂಪಿಸುವುದು ಹಿಂದುತ್ವ ರಾಜಕಾರಣದ ರೂಢಿಗತವಾದ ನಡೆ. ಇದೇ ಮಾರ್ಗವನ್ನು ಚಲನಚಿತ್ರವೂ ಅನುಸರಿಸಿದೆ. ಇಲ್ಲಿ ಸುಳ್ಳು ನಿರೂಪಣೆಯಷ್ಟೇ ಇರುವುದಲ್ಲ, ಕಲೆಯ ಸೋಗಿನಲ್ಲಿ ಅದನ್ನು ಅತ್ಯಂತ ಭಾವನಾತ್ಮಕವಾಗಿ ಪ್ರಸ್ತುತಪಡಿಸಲಾಗಿದೆ. ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕುವುದನ್ನು ಬಿಟ್ಟರೆ ನ್ಯಾಯ ಅಥವಾ ಶಾಂತಿ ಸ್ಥಾಪನೆಯ ಉದ್ದೇಶ ಅದಕ್ಕಿಲ್ಲ. ಈ ಉದ್ದೇಶಗಳಿಗೆ ವಿರುದ್ಧವಾಗಿದೆ ಸಿನಿಮಾ.
ಬಿಜೆಪಿ ನೇತೃತ್ವದ ಸರ್ಕಾರಗಳು ಪಂಡಿತರಿಗೆ ತಮ್ಮ ತಾಯ್ನಾಡಿನಲ್ಲಿ ಈವರೆಗೂ ಪರಿಣಾಮಕಾರಿಯಾದ ಪುನರ್ವಸತಿಯನ್ನು ಕಲ್ಪಿಸಲಿಲ್ಲವೇಕೆ ಎಂಬ ಪ್ರಶ್ನೆಯನ್ನು ಚಿತ್ರ ಎತ್ತುವುದಿಲ್ಲ. ಪಂಡಿತರು ಮತ್ತು ಮುಸಲ್ಮಾನರು ಇಬ್ಬರೂ ಇತಿಹಾಸದಿಂದ ಗಾಸಿಗೊಂಡಿದ್ದಾರೆ. ದೇಶದ ಏಕತೆ ಹಾಗೂ ಸಮಗ್ರತೆಯಲ್ಲಿ ನಿಜವಾಗಿಯೂ ಆಸಕ್ತಿ ಇದ್ದರೆ ಸರ್ಕಾರವು ಸತ್ಯಶೋಧನೆ ಮತ್ತು ಸಂಧಾನ ಸಾಧನೆಗೆ ಪೂರಕವಾಗಿ ಆಯೋಗವೊಂದನ್ನು ರಚಿಸಬೇಕು. ಆಗಿರುವ ಗಾಯಗಳನ್ನು ಗುಣಪಡಿಸಲು ಆ ಆಯೋಗವು ನೆರವಾಗಬೇಕು, ಪಂಡಿತರು ತಾಯ್ನಾಡಿಗೆ ಮರಳಲು ಸಹಾಯ ಮಾಡಬೇಕು. ಆ ಮೂಲಕ ಎಲ್ಲರ ಹೃದಯ ಮತ್ತು ಮನಸ್ಸನ್ನು ಅದು ಗೆಲ್ಲಬೇಕು. ಅಷ್ಟೇ ಅಲ್ಲ, ಅಂತಹ ಆಯೋಗವು 'ಕಾಶ್ಮೀರ ಸಮಸ್ಯೆ'ಯ ಪರಿಹಾರಕ್ಕೂ ದಾರಿ ಮಾಡಿಕೊಡಬಹುದು. ಪಂಡಿತರಿಗೆ ಬೇಕಾಗಿರುವುದೂ ಅದೇ. ಜೊತೆಗೆ ಭಾರತಕ್ಕೆ ಬೇಕಾಗಿರುವುದು ಸಹ ಅದೇ ವಿನಾ ದ್ವೇಷ ಹುಟ್ಟಿಸುವ, ಧ್ರುವೀಕರಣಕ್ಕೆ ಕಾರಣವಾಗುವ ಪ್ರಚಾರವಲ್ಲ.